ಬೆಂಗಳೂರು, ಆ 06 (DaijiworldNews/PY): "ಈಶ್ವರಪ್ಪ ಅವರೇ, ನಿಮ್ಮ ಮಾತಿನ ಅರ್ಥ ಈಗಿನ ಸಿಎಂ ರಾಷ್ಟ್ರ ವಿರೋಧಿಯೇ!?" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, "ಈಶ್ವರಪ್ಪ ಅವರೇ, ನಿಮ್ಮ ಮಾತಿನ ಅರ್ಥ ಈಗಿನ ಸಿಎಂ ರಾಷ್ಟ್ರ ವಿರೋಧಿಯೇ!? ಇದು ಆಪರೇಷನ್ ಕಮಲದ ಅನೈತಿಕ ಸರ್ಕಾರ ಎಂಬುದನ್ನ ಒಪ್ಪಿಕೊಳ್ಳುತ್ತಾ, ಹೊರಗಿನವರ ಬೆಂಬಲದಲ್ಲಿದೆ ಈ ಸರ್ಕಾರ ಎಂದಿದ್ದೀರಿ. ಬಿಜೆಪಿಯಲ್ಲಿ ವಲಸಿಗರನ್ನು 'ಹೊರಗಿನವರು' ಎಂಬ ಭಾವನೆಯಲ್ಲಿಯೇ ಕಾಣಲಾಗುತ್ತಿದೆ ಎನ್ನಲು ಈ ಮಾತು ಪುಷ್ಠಿ ಕೊಡುತ್ತದೆ!" ಎಂದಿದೆ.
"ದಲಿತರನ್ನು ಸಿಎಂ ಮಾಡಿಲ್ಲ, ದಲಿತರನ್ನ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿಲ್ಲ, ಸಂಪುಟದಲ್ಲಿ ದಲಿತರಿಗೆ ಪ್ರಾತಿನಿಧ್ಯವಿಲ್ಲ, ದಲಿತರಿಗೆ ಪಕ್ಷದಲ್ಲಿ ಜಾಗವಿಲ್ಲ, ದಲಿತರನ್ನು ತುಳಿಯುವುದನ್ನೇ ತನ್ನ ಮುಖ್ಯ ಅಜೆಂಡಾ ಮಾಡಿಕೊಂಡಿರುವ ಬಿಜೆಪಿ ದಲಿತರ ಏಳಿಗೆಗೆ ಶ್ರಮಿಸಿದ ಕಾಂಗ್ರೆಸ್ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ" ಎಂದು ಲೇವಡಿ ಮಾಡಿದೆ.
"ಬಿಜೆಪಿ ಕಾಂಗ್ರೆಸ್ ಪಕ್ಷದ ಬಗ್ಗೆ ಚಿಂತಿಸಿದ್ದರ ಅರ್ಧದಷ್ಟು ತಮ್ಮದೇ ಪಕ್ಷದ ಬಗ್ಗೆ ಗಮನ ಹರಿಸಿದ್ದರೆ ಬಿಎಸ್ವೈ ಸಿಎಂ ಆಗಿಯೇ ಇರುತ್ತಿದ್ದರು! ಇನ್ನಾದರೂ ನಿಮ್ಮ ತಟ್ಟೆಯಲ್ಲಿನ ಹೆಗ್ಗಣದತ್ತ ಚಿತ್ತ ಹರಿಸಿ, ಇಲ್ಲದಿದ್ದರೆ ಬೊಮ್ಮಾಯಿಯವರೂ ಮನೆಯ ದಾರಿ ಹಿಡಿಯಬೇಕಾದೀತು! ಸಂಪುಟ ನೋಡಿದರೆ ದಲಿತವಿರೋಧಿಬಿಜೆಪಿ ಎಂದು ತಿಳಿಯುತ್ತದೆ" ಎಂದು ಆರೋಪಿಸಿದೆ.
"ಹಿಂದೆಂದೂ ಸಂಸತ್ತಿನ ಮೆಟ್ಟಿಲು ತುಳಿಯದ ಮೋದಿಯವರಿಗೆ ಇದರ ಅರಿವಿಲ್ಲದಿರಬಹುದು, ಆದರೆ ಈಗ ಆಡಳಿತದಲ್ಲಿರುವ ಪ್ರಧಾನಿ ಮೋದಿ ಹಿಂದೆ ತಮ್ಮದೇ ಪಕ್ಷದ ಮಾತುಗಳನ್ನ ನೆನಪಿಸಿಕೊಳ್ಳಲಿ. ಸರ್ಕಾರ ಬಯಸಿದಂತೆ ಚರ್ಚೆ ಆಗುವುದಕ್ಕಿಂತ ದೇಶದ ಪ್ರಶ್ನೆಗಳಿಗೆ ಧ್ವನಿಯಾಗಿರುವ ವಿಪಕ್ಷಗಳು ಬಯಸಿದ ಚರ್ಚೆ ಮಾಡಿ ಬಿಜೆಪಿ ತನ್ನ ತಾಕತ್ತು ಪ್ರದರ್ಶಿಸಲಿ" ಎಂದು ಹೇಳಿದೆ.