ಹೊಸಪೇಟೆ, ಆ.06 (DaijiworldNews/HR): "ನನಗೆ ಯಾವ ಖಾತೆ ಬೇಕೆಂದು ಮುಖ್ಯಮಂತ್ರಿಗೆ ಹೇಳಿದ್ದೇನೆ. ಆ ವಿಷಯ ಮಾಧ್ಯಮಗಳಿಗೆ ಹೇಳುವುದಿಲ್ಲ"ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಇದೇ ಖಾತೆ ಕೊಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡಿದ್ದು, ಯಡಿಯೂರಪ್ಪನವರು ಮುಖ್ಯಮಂತ್ರಿಯಿದ್ದಾಗ ಪ್ರವಾಸೋದ್ಯಮ ಖಾತೆ ಬದಲಿಸಿ, ಹಜ್ ಮತ್ತು ವಕ್ಫ್ ಖಾತೆ ನೀಡಿದ್ದರು. ಅವರು ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅನಿವಾರ್ಯ ಕಾರಣಗಳಿಂದ ನನ್ನ ಖಾತೆ ಬದಲಿಸಿದ್ದರು. ಆದರೆ, ಎಂದೂ ನಾನು ಅಸಮಾಧಾನ ತೋಡಿಕೊಂಡಿರಲಿಲ್ಲ" ಎಂದರು.
ಇನ್ನು ಖಾತೆಗೆ ಮತ್ತು ಅಭಿವೃದ್ಧಿಗೂ ಯಾವುದೇ ಸಂಬಂಧವಿಲ್ಲ. ಯಾವುದೇ ಖಾತೆ ಕೊಟ್ಟರೂ ಸರ್ಕಾರವಂತೂ ಇದ್ದೇ ಇರುತ್ತದೆ. ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆ ಆಗುವುದಿಲ್ಲ" ಎಂದಿದ್ದಾರೆ.
ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡಿಲ್ಲ ಎನ್ನುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಾನೇನೂ ಹೇಳುವುದಿಲ್ಲ. ವರಿಷ್ಠರು ತೆಗೆದುಕೊಂಡಿರುವ ತೀರ್ಮಾನವದು. ಮಳೆಯಿಂದ ಆಗಿರುವ ಹಾನಿ, ಕೊರೊನಾ ಮೂರನೇ ಅಲೆ ಬಗ್ಗೆ ಕೈಗೊಂಡಿರುವ ಸಿದ್ಧತೆ ಕುರಿತು ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಸೂಚನೆ ಕೊಟ್ಟಿದ್ದಾರೆ. ಸದ್ಯ ಆ ಕೆಲಸದಲ್ಲಿ ತೊಡಗಿಕೊಂಡಿದ್ದೇನೆ" ಎಂದು ಹೇಳಿದ್ದಾರೆ.