ಟೋಕಿಯೊ, ಆ.06 (DaijiworldNews/HR): ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ವಿಫಲವಾದರೂ ಕೂಡ ಹೆಮ್ಮೆಯ ಭಾರತೀಯರ ಮಹಿಳಾ ಹಾಕಿ ತಂಡದ ಆಟಗಾರ್ತಿಯರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದು, ವೇಳೆ ಆಟಗಾರ್ತಿಯರು ಕಣ್ಣೀರಿಟ್ಟ ಘಟನೆ ನಡೆದಿದೆ.
ಬ್ರಿಟನ್ ವಿರುದ್ಧ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಅನುಭವಿಸಿದ ಸೋಲಿನಿಂದ ಆಟಗಾರ್ತಿಯರು ಬೇಸರದಲ್ಲಿದ್ದಾಗ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಆಟಗಾರ್ತಿಯರಿಗೆ ಧೈರ್ಯ ತುಂಬಿ ಇಡೀ ದೇಶಕ್ಕೆ ನಿಮ್ಮ ಸಾಧನೆ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿದರು.
ಇನ್ನು "ನೀವೆಲ್ಲರೂ ಅದ್ಭುತ ಆಟವಾಡಿದ್ದು, ಸಾಕಷ್ಟು ಬೆವರು ಸುರಿಸಿದ್ದೀರಿ. ಕಳೆದ 5-6 ವರ್ಷಗಳಿಂದ ನೀವು ಪಟ್ಟ ಪರಿಶ್ರಮವು ದೇಶದ ಕೋಟ್ಯಂತರ ಹೆಣ್ಮಕ್ಕಳಿಗೆ ಪ್ರೇರಣೆಯಾಗಿದ್ದು, ತಂಡದ ಎಲ್ಲ ಆಟಗಾರ್ತಿಯರು ಹಾಗೂ ಕೋಚ್ಗೆ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಹೇಳಿದ್ದಾರೆ.
"ದೇಶಕ್ಕೆ ನಿಮ್ಮ ಸಾಧನೆಯ ಬಗ್ಗೆ ಹೆಮ್ಮೆಯಿದೆ. ಹಾಗಾಗಿ ನೀವು ಬೇಸರ ಪಡುವ ಅಗತ್ಯವಿಲ್ಲ. ಎಷ್ಟು ದಶಕಗಳ ಬಳಿಕ ನಿಮ್ಮ ಮೂಲಕ ಭಾರತದ ಹಾಕಿ ಪುನರುಜ್ಜೀವನಗೊಂಡಿದೆ. ನಿಮ್ಮ ಕಠಿಣ ಪರಿಶ್ರಮದಿಂದ ಮಾತ್ರ ಅದು ಸಾಧ್ಯವಾಗಿದೆ" ಎಂದಿದ್ದಾರೆ.