ನವದೆಹಲಿ, ಆ 06 (DaijiworldNews/PY): ನ್ಯಾಯಾಧೀಶರ ಮೇಲಿನ ಹಲ್ಲೆ ಹಾಗೂ ಬೆದರಿಕೆಯಂತಹ ಘಟನೆಗಳನ್ನು ಗಂಭೀರ ಎಂದು ಸುಪ್ರೀಂಕೋರ್ಟ್ ಪರಿಗಣಿಸಿದ್ದು, ದೇಶದಲ್ಲಿರುವ ನ್ಯಾಯಾಂಗ ಅಧಿಕಾರಿಗಳಿಗೆ ಒದಗಿಸುತ್ತಿರುವ ಭದ್ರತೆಯ ಬಗ್ಗೆ ವರದಿ ಸಲ್ಲಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ.
ಧನ್ಬಾದ್ನ ನ್ಯಾಯಾಧೀಶರ ಸಾವಿನ ವಿಚಾರಣೆಯ ಸಂದರ್ಭ ದೇಶದಲ್ಲಿನ ನ್ಯಾಯಾಧೀಶರ ರಕ್ಷಣೆ ಬಗ್ಗೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನೊಳಗೊಂಡ ನ್ಯಾಯಪೀಠ ಪ್ರಸ್ತಾಪಿಸಿದೆ.
ಈ ವೇಳೆ, "ನ್ಯಾಯಾಧೀಶರ ಸಾವಿನ ಪ್ರಕರಣ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ" ಎಂದು ನ್ಯಾಯಾಪೀಠಕ್ಕೆ ಜಾರ್ಖಂಡ್ ಸರ್ಕಾರದ ಪರ ವಕೀಲರು ಹೇಳಿದ್ದಾರೆ.
ಆಗಸ್ಟ್ 9ರಂದು ಧನ್ಬಾದ್ ನ್ಯಾಯಾಧೀಶರ ಸಾವಿನ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದ ನ್ಯಾಯಪೀಠ, ಸಿಬಿಐಗೆ ಈ ಬಗ್ಗೆ ನೋಟಿಸ್ ನೀಡುತ್ತಿರುವುದಾಗಿ ತಿಳಿಸಿದೆ.
"ನ್ಯಾಯಾಧೀಶರಿಗೆ ದೇಶದ ಹಲವು ರಾಜ್ಯಗಳಲ್ಲಿ ಬೆದರಿಕೆಯೊಡ್ಡಿರುವ ಹಲವು ಪ್ರಕರಣಗಳ ಹಿಂದೆ ಪಾತಕಿಗಳು ಹಾಗೂ ಉನ್ನತ ಮಟ್ಟದ ವ್ಯಕ್ತಿಗಳಿದ್ದಾರೆ" ಎಂದು ಜನರಲ್ ಕೆ.ಕೆ.ವೇಣುಗೋಪಾಲ್ಗೆ ನ್ಯಾಯಪೀಠ ತಿಳಿಸಿದೆ.
ಜುಲೈ 28ರಂದು ಜಾರ್ಖಂಡ್ನ ಧನ್ಬಾದ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಅವರು ಬೆಳಿಗ್ಗೆ ಜಾಗಿಂಗ್ ಹೋಗುತ್ತಿದ್ದ ಸಂದರ್ಭ ಅವರಿಗೆ ಆಟೋ ರಿಕ್ಷಾವೊಂದು ಗುದ್ದಿ ಪರಾರಿಯಾಗಿತ್ತು. ಘಟನೆಯಲ್ಲಿ ಉತ್ತಮ್ ಆನಂದ್ ಅವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ದಾರಿಹೋಕರೊಬ್ಬರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆಸ್ಪತ್ರೆಗೆ ತಲುಪುವ ಮುನ್ನವೇ ಉತ್ತಮ್ ಆನಂದ್ ಅವರು ಸಾವನ್ನಪ್ಪಿದ್ದರು ಎಂದು ವೈದ್ಯರು ತಿಳಿಸಿದ್ದರು.