ನವದೆಹಲಿ, ಆ 06 (DaijiworldNews/MS): ಕೆಆರ್ ಎಸ್ ಸುತ್ತಾಮುತ್ತಾ ಅಕ್ರಮ ಗಣಿಗಾರಿಕೆ ಬಗ್ಗೆ ಧ್ವನಿ ಎತ್ತಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಈ ವಿಚಾರವನ್ನು ಲೋಕಸಭೆಯಲ್ಲೂ ಪ್ರಸ್ತಾಪಿಸಿದ್ದಾರೆ.
ಲೋಕಸಭೆಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಮಾತನಾಡಿದ ಸುಮಲತಾ ಅಂಬರೀಶ್ ಅವರು, ಕೆಆರ್ಎಸ್ ಸುತ್ತ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಇದರಿಂದ ಸ್ಥಳೀಯರಿಗೆ ತೊಂದರೆಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ತೆಗೆದುಗೊಳ್ಳಬೇಕು ಗ್ರಾಮಗಳನ್ನು ಉಳಿಸಬೇಕು ಎಂದು ಒತ್ತಾಯಿಸಿದರು.
ಗಣಿಗಾರಿಕೆ ಬಳಸುತ್ತಿರುವ ರಾಸಾಯನಿಕಾ ಸ್ಪೋಟದಿಂದ ಗ್ರಾಮದ ಜನ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಂಂದ ಬಳಲುತ್ತಿದ್ದಾರೆ, ಇದು ರೈತರು ಬೆಳೆಯುತ್ತಿರುವ ಬೆಳೆಗಳ ಮೇಲೂ ಪರಿಣಾಮ ಬೀರಿದೆ. ಕೇಂದ್ರ ಸರ್ಕಾರ ಕೂಡಲೇ ಅಕ್ರಮ ಗಣಿಗಾರಿಕೆ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸುಮಲತಾ ಅವರು ಮನವಿ ಮಾಡಿಕೊಂಡರು.
ಇದಕ್ಕೆ ಉತ್ತರಿಸಿದ ಸಚಿವ ಭೂಪೇಂದ್ರ ಯಾದವ್ ಅವರು, 34 ರಾಜ್ಯಗಳಲ್ಲಿ 1,140 ವಾಯು ನಿಯಂತ್ರಣ ಕೇಂದ್ರಗಳು ಸ್ಥಾಪಿಸಿದ್ದು, ಮಂಡ್ಯ ಕ್ಷೇತ್ರದ ಬಗ್ಗೆಯೂ ಪರಿಶೀಲನೆ ಮಾಡಲಾಗುವುದು ಎಂದು ಹೇಳಿದರು.
ಈ ಹಿಂದೆ ರಾಜ್ಯದಲ್ಲಿ ಕೆಆರ್ ಎಸ್ ಸುತ್ತಾಮುತ್ತಾ ಅಕ್ರಮ ಗಣಿಗಾರಿಕೆ ಪ್ರಸ್ತಾಪಿಸಿದ್ದ ಸಂಸದೆ ಸುಮಲತಾ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿತ್ತು.