ರಾಮನಗರ, ಆ 06 (DaijiworldNews/PY): "ಜಮೀರ್ ಅಹ್ಮದ್ ಖಾನ್ ಅವರ ವಿರುದ್ದ ಯಾರು ದೂರು ನೀಡಿದ್ದಾರೆ ಎನ್ನುವುದನ್ನು ಇಡಿ ಅವರೇ ತಿಳಿಸಬೇಕು. ನಾನು ಯಾರ ಬಗ್ಗೆಯೂ ದೂರು ನೀಡಿಲ್ಲ" ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಬಿಡದಿಯಲ್ಲಿ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಾರು ಜಮೀರ್ ಅವರ ಬಗ್ಗೆ ದೂರು ನೀಡಿದ್ದಾರೆ ಎನ್ನುವ ಬಗ್ಗೆ ನನಗೆ ತಿಳಿದಿಲ್ಲ. ಯಾರ ಬಗ್ಗೆಯೂ ನಾನಂತೂ ದೂರು ನೀಡಿಲ್ಲ. ದೂರು ಯಾರು ನೀಡಿದ್ದಾರೋ ಅವರೇ ಸಮರ್ಥವಾಗಿ ಉತ್ತರ ಕೊಟ್ಟುಕೊಳ್ಳುತ್ತಾರೆ" ಎಂದು ಹೇಳಿದ್ದಾರೆ.
"ರಾಜಕೀಯದಲ್ಲಿ ಇರುವಾಗ ಹಲವು ರೀತಿಯ ತೊಂದರೆಗಳನ್ನು ನಾವು ಅನುಭವಿಸಬೇಕಾಗುತ್ತದೆ. ನಾವು ಸರಿಯಾಗಿದ್ದಲ್ಲಿ ನಮ್ಮನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ" ಎಂದಿದ್ದಾರೆ.
"ಕೇಂದ್ರ ಸರ್ಕಾರದಲ್ಲಿರುವ ಕೆಲ ಸಂಸ್ಥೆಗಳು, ಮೂಗರ್ಜಿಗಳನ್ನು ಬರೆದು, ಈ ರೀತಿ ಸಂದರ್ಭ ತನಿಖೆ ಮಾಡಿಕೊಂಡು ಬಂದಿರುವಂತದ್ದು, ಆಗಿನಿಂದಲೂ ನಡೆದುಕೊಂಡು ಬಂದಿದೆ. ಹಲವು ಬಾರಿ ನಮ್ಮ ಮೇಲೂ ತನಿಖೆಯಾಗಿಲ್ವಾ?. ಇದೇ ಜಮೀನಿನ ಮೇಲೆ 25, 30 ವರ್ಷ ನಮಗೆಷ್ಟು ಕಾಟ ನೀಡಿದ್ದಾರೆ ಎನ್ನುವುದು ನಮಗೆ ಮಾತ್ರ ತಿಳಿದಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.