ಬೆಂಗಳೂರು, ಆ.06 (DaijiworldNews/HR): ಜಮೀರ್ ಅಹ್ಮದ್ ಖಾನ್ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ಬಲೆಗೆ ಬಿದ್ದಿರುವುದರಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಲಾಭವಾಗಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, "ನೂರಾರು ಕೋಟಿ ಲೂಟಿ ಹೊಡೆದು ಅಕ್ರಮ ಸಂಪತ್ತು ಗಳಿಸಿರುವ ಶಾಸಕ ಜಮೀರ್ ಅಹ್ಮದ್ ಖಾನ್ ಈಗ ಇ.ಡಿ ಬಲೆಗೆ ಬಿದ್ದಿರುವುದು ಯಾರಿಗೆ ಲಾಭ ತರಬಹುದೆಂಬುದಕ್ಕೆ ಉತ್ತರ ಲಭಿಸಿದೆ. ಮುಂದಿನ ಚುನಾವಣೆಗಾಗಿ ಸುರಕ್ಷಿತ ಕ್ಷೇತ್ರ ಅರಸುತ್ತಿರುವ ಸಿದ್ದರಾಮಯ್ಯ ಅವರೇ ಇದರ ಸಂಪೂರ್ಣ ಫಲಾನುಭವಿಯಾಗಿದ್ದಾರೆ. ನೆಪ ಮಾತ್ರಕ್ಕೆ ದಾಳಿಯನ್ನು ಖಂಡಿಸುತ್ತಿದ್ದಾರೆ!" ಎಂದಿದೆ.
ಇನ್ನು "ಸಿದ್ದರಾಮಯ್ಯ ಅವರೇ, ಜಮೀರ್ ಮನೆ ಮೇಲೆ ನಡೆದ ಇ.ಡಿ ದಾಳಿ ರಾಜಕೀಯ ಪ್ರೇರಿತ ಎಂದು ನೀವು ಆರೋಪಿಸುತ್ತಿದ್ದೀರಿ. ಆದರೆ, ಇ.ಡಿ ವಿಚಾರಣೆಯಿಂದ ನೆಮ್ಮದಿಯಾಗಿದೆ ಎಂದು ಜಮೀರ್ ಹೇಳಿದ್ದಾರೆ. ಹಾಗಾದರೆ ನಿಮ್ಮ ಹೇಳಿಕೆಯೇ ರಾಜಕೀಯ ಪ್ರೇರಿತವಲ್ಲವೇ?" ಎಂದು ಬಿಜೆಪಿ ಪ್ರಶ್ನಿಸಿದೆ.
"ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಕಾಲಿಟ್ಟ ಕ್ಷಣದಲ್ಲೇ, ಪ್ರತಿಪಕ್ಷ ಸ್ಥಾನದಿಂದ ಖರ್ಗೆಯವರನ್ನು ಖಾಲಿ ಮಾಡಿಸಿದರು. ನಂತರ ಸಿಎಂ ರೇಸ್ನಲ್ಲಿದ್ದ ದಲಿತ ನಾಯಕನನ್ನು ಸೋಲಿಸಿದರು. ಚಾಮರಾಜಪೇಟೆ ಕ್ಷೇತ್ರದ ಮೇಲೆ ಕಣ್ಣು ಹಾಯಿಸಿದ ಕೂಡಲೇ ಜಮೀರ್ ಅಕ್ರಮ ಬೆಳಕಿಗೆ ಬಂದು ಸಂಕಟಕ್ಕೆ ಸಿಲುಕಿಕೊಂಡರು" ಎಂದು ಹೇಳಿದೆ.