ನವದೆಹಲಿ, ಆ.06 (DaijiworldNews/HR): ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ)ನ ಹಣಕಾಸು ನೀತಿಯನ್ನು ಗವರ್ನರ್ ಶಕ್ತಿಕಾಂತ ದಾಸ್ ಅವರು ಇಂದು ಪ್ರಕಟಿಸಿದ್ದು, ಈಗಿರುವ ಶೇ 4ರ ರೆಪೊ ದರವನ್ನು ಮುಂದುವರಿಸುವುದು ಎಂದು ತಿಳಿಸಿದ್ದಾರೆ.
ಆರ್ಬಿಐ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಸತತ ಏಳು ಬಾರಿ ಬಡ್ಡಿ ದರದಲ್ಲಿ ಯಥಾ ಸ್ಥಿತಿ ಕಾಯ್ದುಕೊಂಡಂತಾಗಿದ್ದು, ಈ ಹಿಂದೆ 2020ರ ಮೇ 22ರಂದು ಆರ್ಬಿಐ ರೆಪೊ ದರದಲ್ಲಿ ಕಡಿತ ಮಾಡಿತ್ತು ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಶಕ್ತಿಕಾಂತ ದಾಸ್, "ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುವ ಮತ್ತು ಹಣದುಬ್ಬರ ಪ್ರಮಾಣವನ್ನು ಮಿತಿಯಲ್ಲಿ ಇರಿಸುವ ಸಲುವಾಗಿ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಬಗ್ಗೆ ಹಣಕಾಸು ನೀತಿ ಸಮಿತಿಯು ಸರ್ವಾನುಮತದಿಂದ ನಿರ್ಧಾರಕ್ಕೆ ಬಂದಿದೆ" ಎಂದು ತಿಳಿಸಿದ್ದಾರೆ.