ಮೈಸೂರು, ಆ 06 (DaijiworldNews/PY): "ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂದು ಪದೇ ಪದೇ ಜಮೀರ್ ಅಹ್ಮದ್ ಹೇಳುತ್ತಿದ್ದ ಕಾರಣ ಜಮೀರ್ ನಿವಾಸದ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ದಾಳಿ ಮಾಡಿಸಿರಬೇಕು" ಎಂದು ಎಸ್.ಟಿ ಸೋಮಶೇಖರ್ ಲೇವಡಿ ಮಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, "ಡಿ.ಕೆ. ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಯ ಸಂಪರ್ಕ ಸಾಕಷ್ಟಿದೆ" ಎಂದು ವ್ಯಂಗ್ಯವಾಡಿದ್ದಾರೆ.
"ಈ ರೀತಿಯಾದ ದಾಳಿಯನ್ನು ಬಿಜೆಪಿ ಮಾಡಿಸುತ್ತಿದೆ ಎಂದು ಕಾಂಗ್ರೆಸ್ ಹೇಳಿದಲ್ಲಿ, ನಾವು ಹಾಗೇ ಅವರತ್ತಲೇ ಬೆರಳು ಮಾಡಬಹುದು ಅಲ್ಲವೇ?" ಎಂದು ಕೇಳಿದ್ದಾರೆ.
"ವ್ಯವಹಾರಗಳು ಸರಿ ಇದ್ದರೆ, ಯಾರೂ ಹೆದರುವ ಅಗತ್ಯವಿಲ್ಲ. ಅಧಿಕಾರಿಗಳಿಗೆ ದಾಖಲೆ ನೀಡಿದರೆ ಸಾಕು. ಈ ಬಗ್ಗೆ ಕಾಂಗ್ರೆಸ್ ಮಾಡುತ್ತಿರುವ ಆರೋಪ ನೋಡಿದರೆ ವ್ಯವಹಾರ ಸರಿ ಇಲ್ಲ ಎಂದೆನಿಸುತ್ತದೆ. ಜಾರಿ ನಿರ್ದೇಶನಾಯಲದವರು ಅವರ ಕೆಲಸ ಮಾಡುತ್ತಾರೆ" ಎಂದಿದ್ದಾರೆ.
ಶಾಸಕ ಜಮೀರ್ ಅಹ್ಮದ್ ಹಾಗೂ ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೆ ಇಡಿ ದಾಳಿ ನಡೆಸಿದ್ದು, 23 ಗಂಟೆಗಳ ಕಾಲ ದಾಖಲೆ ಹುಡುಕಾಟ ಹಾಗೂ ವಿಚಾರಣೆ ನಡೆಸಿ, ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.