ಬೆಂಗಳೂರು, ಆ 06 (DaijiworldNews/PY): ನೂತನ ಸಚಿವರಿಗೆ ಇಂದು ಖಾತೆಗಳ ಹಂಚಿಕೆಯಾಗುವ ಸಾಧ್ಯತೆ ಇದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರೇ ಈ ಬಗ್ಗೆ ಸುಳಿವು ನೀಡಿದ್ದಾರೆ. ಶುಕ್ರವಾರ ಖಾತೆ ಹಂಚಿಕೆ ಪೂರ್ಣಗೊಳ್ಳಲಿದೆ ಎಂದು ಗುರುವಾರ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಎಂ ಬೊಮ್ಮಾಯಿ, "ಆಗಸ್ಟ್ 6ರಂದು ನೂತನ ಸಚಿವರಿಗೆ ಖಾತೆ ಹಂಚಿಕೆ ಪೂರ್ಣಗೊಳ್ಳಲಿದೆ" ಎಂದಿದ್ದರು.
ಹಿಂದಿನ ಬಿ. ಎಸ್.ಯಡಿಯೂರಪ್ಪ ಅವರ ಸಂಪುಟದಲ್ಲಿ 23 ಮಂದಿ ಸಚಿವರಾಗಿದ್ದು, ಆರು ಮಂದಿ ಹೊಸಬರಾಗಿದ್ದಾರೆ. ಕೆಲವು ಮಂತ್ರಿಗಳು ಹಿಂದಿನ ಖಾತೆಗಳನ್ನು ಪಡೆಯಲು ಬಯಸುತ್ತಿದ್ದು, ಇನ್ನೂ ಕೆಲವರು ದೊಡ್ಡ ಖಾತೆಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.
ಗೋವಿಂದ ಕಾರಜೋಳ ಹಾಗೂ ಕೆ.ಎಸ್ ಈಶ್ವರಪ್ಪ ಅವರಂತ ಹಿರಿಯ ನಾಯಕರು ತಮ್ಮ ಹಿಂದಿನ ಖಾತೆಗಳನ್ನೇ ಮತ್ತೆ ಪಡೆದುಕೊಳ್ಳಲು ಬಯಸಿದ್ದಾರೆ ಎಂದು ತಿಳಿದುಬಂದಿದೆ.
ಕೆಲವು ಸಚಿವರು ತಮಗೆ ಇಂತಹ ಖಾತೆಯೇ ಬೇಕು ಎಂದು ಪಟ್ಟು ಹಿಡಿದಿರುವ ಹಿನ್ನೆಲೆ ಸಿಎಂ ಬೊಮ್ಮಾಯಿ ಅವರು ವರಿಷ್ಠರ ಸಲಹೆ ಮಾರ್ಗದರ್ಶನದ ಪ್ರಕಾರ ಸಚಿವರುಗ ಸಾಮರ್ಥ್ಯಕ್ಕೆ ಅನುಗುಣವಾದ ಖಾತೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಖಾತೆ ಹಂಚಿಕೆಯಲ್ಲೂ ಕೂಡಾ ವರಿಷ್ಠರ ಮಾರ್ಗದರ್ಶನದಂತೆ ಮುಂದುವರಿಯಲು ಸಿಎಂ ಬೊಮ್ಮಾಯಿ ತೀರ್ಮಾನಿಸಿದ್ದು, ವರಿಷ್ಠರ ಸೂಚನೆಯ ಪ್ರಕಾರವೇ ಖಾತೆ ಹಂಚಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದ ನೂತನ ಸಚಿವರ ಚಿತ್ತ ದೆಹಲಿ ವರಿಷ್ಠರ ತೀರ್ಮಾನದತ್ತ ಹರಿದಿದೆ.
ಇನ್ನು ಈ ಮಧ್ಯೆ, ಸಂಘ-ಪರಿವಾರದ ಸದಸ್ಯರಿಗೆ ದೊಡ್ಡ ಮಟ್ಟದ ಖಾತೆ ನೀಡಲು ಕೇಂದ್ರೀಯ ನಾಯಕತ್ವ ಹಾಗೂ ಆರ್ಎಸ್ಎಸ್ ಚಿಂತನೆ ನಡೆಸಿದೆ. ದಶಕಗಳಿಂದ ಸಂಘ-ಪರಿವಾರದೊಂದಿಗಿದ್ದು, ಮೊದಲ ಬಾರಿಗೆ ಮಂತ್ರಿಗಳಾಗಿರುವ ವಿ ಸುನೀಲ್ ಕುಮಾರ್ ಹಾಗೂ ಬಿ.ಸಿ ನಾಗೇಶ್ ಅವರಿಗೆ ದೊಡ್ಡ ಖಾತೆಗಳು ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಎಂಟಿಬಿ ನಾಗರಾಜ್ ಹಾಗೂ ಮುನಿರತ್ನ ಅವರಿಗೆ ಸಣ್ಣ ಮಟ್ಟದ ಖಾತೆಗಳ ಜವಾಬ್ದಾರಿ ನೀಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯನ್ನು ಶಶಿಕಲಾ ಜೊಲ್ಲೆ ಅವರಿಗೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಮುರುಗೇಶ್ ನಿರಾಣಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎಸ್ ಅಶ್ವತ್ಥ ನಾರಾಯಣ್ ಅವರಿಗೆ ಒಂದಕ್ಕಿಂತ ಹೆಚ್ಚಿನ ಸಚಿವಾಲಯಗಳ ಉಸ್ತುವಾರಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.