ಮೈಸೂರು, ಆ 06 (DaijiworldNews/PY): ತನ್ನ ಹುಟ್ಟುಹಬ್ಬದ ದಿನವೇ ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆತ್ಮತೃಪ್ತಿಯಿಂದ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುತ್ತಿದ್ದೇನೆ. ನಾಲ್ಕು ವರ್ಷದ ಹಿಂದೆಯೇ ನಾನು ನಿವೃತ್ತಿ ಬಯಸಿದ್ದೆ. ಇನ್ನು ಮುಂದೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಾನು ಈ ಮಾತಿನಿಂದ ಹಿಂದೆ ಸರಿಯುವುದಿಲ್ಲ" ಎಂದಿದ್ದಾರೆ.
"ಈವರೆಗೆ ನಾನು 14 ಚುನಾವಣೆ ಎದುರಿಸಿದ್ದೇನೆ. 12ನೇ ಚುನಾವಣೆಯೇ ಸಾಕಾಗಿತ್ತು. ಕಂದಾಯ ಸಚಿವನಾಗಿ ಅವಧಿ ಪೂರ್ಣಗೊಳಿಸಲು ಎರಡು ವರ್ಷ ಅವಕಾಶ ನೀಡಿದ್ದರೆ ಸಾಕಿತ್ತು. ಅದುವೇ ನನ್ನ ಕೊನೆಯ ಚುನಾವಣೆ ಆಗುತ್ತಿತ್ತು. ಈವರೆಗಿನ ರಾಜಕೀಯ ಜೀವನದ ಬಗ್ಗೆ ನನಗೆ ತೃಪ್ತಿ ಇದೆ" ಎಂದು ತಿಳಿಸಿದ್ದಾರೆ.