ಬೆಂಗಳೂರು, ಆ 06 (DaijiworldNews/MS): ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತು ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೆ ನಡೆದಂತಹ ಇಡಿ ದಾಳಿ ಅಂತ್ಯವಾಗಿದೆ.
ಇಡಿ ದಾಳಿಯ ವಿಚಾರವಾಗಿ ಮಾತನಾಡಿರುವ ಶಾಸಕ ಜಮೀರ್ , ನನ್ನ ಮನೆ ವಿಚಾರವಾಗಿ ಯಾರೋ ದೂರು ಕೊಟ್ಟಿದ್ದಾರಂತೆ ಹೀಗಾಗಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೆ ಆ ದೂರುದಾರರಿಗೆ ದೇವರೇ ಉತ್ತರ ಕೊಡ್ತಾನೆ . ಕಳ್ಳತನ, ಲೂಟಿ ಮಾಡಿದ್ರೆ ತಪ್ಪು, ಆದ್ರೆ ಸ್ವಂತ ದುಡಿಮೆಯಿಂದ ಸಂಪಾದಿಸಿದ ದುಡ್ಡು. ನಾನು ನೀಡಿದ ದಾಖಲೆಗಳು ಸರಿಯಿದ್ದ ಕಾರಣ ನನ್ನ ಮನೆಯಿಂದ ಇಡಿ ಅಧಿಕಾರಿಗಳು ವಾಪಸ್ ಆಗಿದ್ದಾರೆ. ನಾವು ಟ್ರಾವೆಲ್ ಏಜೆನ್ಸಿಯನ್ನು ನಡೆಸುತ್ತೇವೆ. ಇಡಿ ಅಧಿಕಾರಿಗಳು ಅದರ ಮೇಲೂ ದಾಳಿ ನಡೆಸಿದ್ದಾರೆ. ಅಲ್ಲೂ ಅವರಿಗೆ ಏನೂ ಸಿಕ್ಕಿಲ್ಲ ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಇನ್ನು ಗುರುವಾರ ಬೆಳ್ಳಂಬೆಳಗ್ಗೆ ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತು ರೋಷನ್ ಬೇಗ್ ಅವರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ೨೪ ಗಂಟೆಗಳ ಈ ದೀರ್ಘ ದಾಳಿ ಅಂತ್ಯವಾಗಿದೆ. ಇಡಿ ದಾಳಿ ಬಗ್ಗೆ ರೋಷನ್ ಬೇಗ್ ಅವರು ಪ್ರತಿಕ್ರಿಯೆ ನೀಡಿದ್ದು, ಅಧಿಕಾರಿಗಳಿಗೆ ಸಹಕಾರ ನೀಡಿದ್ದೇನೆ. ಇಡಿ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಅಕ್ರಮ ಹಣ ವರ್ಗಾವಣೆ ಬಗ್ಗೆ ಇಡಿ ಅಧಿಕಾರಿಗಳು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ್ದೇನೆ ಎಂದರು.