ಕಾಸರಗೋಡು, ಆ. 05 (DaijiworldNews/SM): ತಲಪಾಡಿಯಲ್ಲಿ ಕರ್ನಾಟಕ ಸರಕಾರ ಜಾರಿಗೆ ತಂದಿರುವ ನಿರ್ಬಂಧಗಳ ಹಿನ್ನಲೆಯಲ್ಲಿ ಕರ್ನಾಟಕ ಸರಕಾರ ಜೊತೆ ಮಾತುಕತೆ ನಡೆಸುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ವಿಧಾನಸಭೆಯಲ್ಲಿ ತಿಳಿಸಿದರು.
ಅವರು ಮಂಜೇಶ್ವರ ಶಾಸಕ ಎ.ಕೆ. ಎಂ. ಅಶ್ರಫ್ ರವರ ಪ್ರಶ್ನೆಗೆ ಉತ್ತರಿಸಿ ಈ ವಿಚಾರ ತಿಳಿಸಿದ್ದಾರೆ. ಕೇರಳ-ಕರ್ನಾಟಕ ಗಡಿಯಲ್ಲಿನ ನಿರ್ಬಂಧ ಗಂಭೀರ ವಿಷಯವಾಗಿದ್ದು, ಕೇಂದ್ರ ಸರಕಾರದ ಆದೇಶದ ವಿರುದ್ಧವಾಗಿ ಕರ್ನಾಟಕ ಸರಕಾರ ಹೊಸ ನಿರ್ಬಂಧಗಳನ್ನು ಜಾರಿಗೆ ತಂದಿದ್ದು, ಈಗಾಗಲೇ ಕೇರಳ ಡಿಜಿಪಿ ಕರ್ನಾಟಕ ಡಿಜಿಪಿ ಜೊತೆ ಮಾತುಕತೆ ನಡೆಸಿದ್ದು, ಅಗತ್ಯ ತೀರ್ಮಾನ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಕೇರಳದಿಂದ ಕರ್ನಾಟಕಕ್ಕೆ ತೆರಳಲು 72 ಗಂಟೆಯೊಳಗೆ ನಡೆಸಿದ ಕೋವಿಡ್ ನೆಗಟಿವ್ ಸರ್ಟಿಫಿಕೇಟ್ ಕರ್ನಾಟಕ ಸರಕಾರ ಕಡ್ಡಾಯಗೊಳಿಸಿದೆ. ಆಗಸ್ಟ್ ಎರಡರಿಂದ ತಲಪಾಡಿಯ ಗಡಿಯಲ್ಲಿ ಕರ್ನಾಟಕದ ಅಧಿಕಾರಿಗಳು ತಪಾಸಣೆ ತೀವ್ರಗೊಳಿಸಿದ್ದಾರೆ. ಈ ನಿರ್ಬಂಧದಿಂದ ಚಿಕಿತ್ಸೆ, ಅಗತ್ಯ ಸೇವಾ ವಲಯದವರಿಗೆ ತೊಂದರೆ ಯಾಗದಂತೆ ಪೊಲೀಸ್ ವಿಶೇಷ ಗಮನ ನೀಡುತ್ತಿದೆ.
ಕಾಸರಗೋಡಿನಿಂದ ನಿರಂತರವಾಗಿ ಮಂಗಳೂರಿಗೆ ಹೋಗಿ ಬರುವ ಪ್ರಯಾಣಿಕರಿಗೆ ಆದ್ಯತೆ ನೀಡಿ ಆರ್ ಟಿಪಿಸಿಆರ್ ತಪಾಸಣೆ ನಡೆಸಲು ಗಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಗಡಿಯಲ್ಲಿ ಗೊಂದಲ ಉಂಟಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ.