ಮೈಸೂರು, ಆ 05 (DaijiworldNews/PY): "ವ್ಯವಹಾರದ ಲೆಕ್ಕ ಪತ್ರಗಳಲ್ಲಿ ಅನುಮಾನ ಬಂದ ವೇಳೆ ಈ ರೀತಿಯಾದ ದಾಳಿ ಸಹಜ. ದಾಳಿಯೇ ತಪ್ಪ ಎಂದರೆ ಹೇಗೆ?. ಇಡಿಯವರು ಅವರ ಕೆಲಸ ಮಾಡಬಾರದಾ?" ಎಂದು ಸಚಿವ ಜೆ.ಸಿ ಮಾಧುಸ್ವಾಮಿ ಪ್ರಶ್ನಿಸಿದ್ದಾರೆ.
ಮೈಸೂರಿನ ಸುತ್ತೂರು ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಶಾಸಕ ಜಮೀರ್ಗೆ ಬೇಕಾದಷ್ಟು ವ್ಯವಹಾರವಿದೆ. ಅವರು ಬ್ಯುಸಿನೆಸ್ ಕ್ಲಾಸ್ ಜನ. ನಮ್ಮಂತೆ ಹಳ್ಳಿಯಲ್ಲಿ ಇರುವ ಶಾಸಕರಲ್ಲ. ಹಾಗಾಗಿ ವ್ಯವಹಾರದ ವ್ಯತ್ಯಾಸಗಳ ಬಗ್ಗೆ ಅನುಮಾನ ಬಂದು ಇಂತ ದಾಳಿ ನಡೆದಿರುತ್ತದೆ" ಎಂದಿದ್ದಾರೆ.
"ಕಾಂಗ್ರೆಸ್, ಐಟಿ, ಇಡಿ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಹೇಳುವುದು ತಪ್ಪು. ಸಿದ್ದರಾಮಯ್ಯನಂತವರು ಈ ರೀತಿಯಾಗಿ ಹೇಳುವುದು ಸರಿಯಲ್ಲ. ಕಾಂಗ್ರೆಸ್ಸಿಗರು ಅವರ ಆಡಳಿತ ಕಾಲದಲ್ಲಿ ಐಟಿ, ಇಡಿಗಳನ್ನು ದುರುಪಯೋಗ ಪಡಿಸಿಕೊಂಡಿರಬಹುದು. ಇಂದು ಅದೇ ರೀತಿ ಆಗುತ್ತಿದೆ ಎಂದು ಅವರು ಭಾವಿಸಿದ್ದಾರೆ" ಎಂದು ಹೇಳಿದ್ದಾರೆ.
"ಇದು ರಾಜಕೀಯ ಪ್ರೇರಿತವಾದ ದಾಳಿಯಲ್ಲ. ಲೆಕ್ಕದ ಬಗ್ಗೆ ಅನುಮಾನ ಬಂದಾಗ ಪರಿಶೀಲನೆಗೆ ಬಂದಿರುತ್ತಾರೆ. ಜಮೀರ್ ಲೆಕ್ಕ ಪತ್ರ ಸರಿಯಾಗಿ ಇಟ್ಟುಕೊಂಡಿದ್ದಾರೆ, ಲೆಕ್ಕಪತ್ರವನ್ನು ತೋರಿಸುತ್ತಾರೆ. ಇದಕ್ಕೆ ಬೇರೆ ರೀತಿಯಾದ ಬಣ್ಣ ಬಳಿಯುವ ಕೆಲಸ ಬೇಡ" ಎಂದಿದ್ದಾರೆ.