ಬೆಂಗಳೂರು, ಆ 05 (DaijiworldNews/MS): ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡಿನಲ್ಲಿ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸತ್ಯಾಗ್ರಹ ನಡೆಸುತಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಅಣ್ಣಾಮಲೈ ಉಪವಾಸ ಬೇಕಾದರೂ ಮಾಡಲಿ, ಊಟ ಬೇಕಾದರೂ ಮಾಡಲಿ. ಐ ಡೋಂಟ್ ಕೇರ್ ಆತನನ್ನು ಬಹಳ ದೊಡ್ಡ ಮನುಷ್ಯ ಮಾಡುವ ಅವಶ್ಯಕತೆಯಿಲ್ಲ ಎಂದು ಗುಡುಗಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿ ಬಳಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ವಿರೋಧಿಸಿ ಅಣ್ಣಾಮಲೈ ಧರಣಿ ನಡೆಸುತ್ತಿರುವುದು ರಾಜಕೀಯ ಪ್ರೇರಿತ. ಮೇಕೆದಾಟು ಯೋಜನೆ ನೆರವೇರುವುದು ನಿಶ್ಚಿತ. ಅದಕ್ಕೆ ಕೇಂದ್ರದಿಂದ ಬೇಕಾದ ಒಪ್ಪಿಗೆ ಪಡೆಯುತ್ತೇವೆ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಕೂಡ ಹೆಚ್ಚುವರಿ ನೀರನ್ನು ಬಳಸಿಕೊಳ್ಳಿ ಎಂದು ಹೇಳಿದೆ. ಹೀಗಾಗಿ ಹೆಚ್ಚುವರಿ ನೀರು ಸಂಗ್ರಹಿಸಲು ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರಿಗೆ ನೀರು ಪೂರೈಸುವುದಕ್ಕೆ ಸಂಗ್ರಹಿಸಲಾಗುತ್ತಿದೆ. ಅಂತರಾಜ್ಯ ನದಿ ವಿವಾದ ಈಗಾಗಲೇ ಬಗೆಹರಿದಿದ್ದು, ಟ್ರಿಬ್ಯೂನಲ್ ಕೂಡ ರಚನೆಯಾಗಿದೆ ಎಂದು ಹೇಳಿದ್ದಾರೆ. ಈ ಎಲ್ಲಾ ವಿಚಾರ ತಿಳಿದು ರಾಜಕೀಯ ಪ್ರೇರಿತವಾಗಿ ಪ್ರತಿಭಟಮೆ ನಡೆಸುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.