ನವದೆಹಲಿ, ಆ 05 (DaijiworldNews/PY): "ಪೆಗಾಸಸ್ ಗೂಢಚರ್ಯೆ ಬಗೆಗಿನ ವರದಿಗಳಲ್ಲಿ ಸತ್ಯಾಂಶವಿದ್ದಲ್ಲಿ ಅದು ಗಂಭೀರ ಸ್ವರೂಪದ ಆರೋಪವಾಗುತ್ತದೆ" ಎಂದು ಗುರುವಾರ ಸುಪ್ರೀಂಕೋರ್ಟ್ ಹೇಳಿದೆ.
ಪೆಗಾಸಸ್ ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆಗೆ ಆಗ್ರಹಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಆರಂಭಿಸಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಹಾಗೂ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ಪೀಠ ಹೇಳಿದೆ.
ಹಿರಿಯ ಪತ್ರಕರ್ತ ಎನ್ ರಾಮ್ ಹಾಗೂ ಶಶಿಕುಮಾರ್ ಅವರನ್ನು ಪ್ರತಿನಿಧಿಸಿರುವ ಹಿರು ವಕೀಲ ಕಪಿಲ್ ಸಿಬಲ್ ಅವರ ಬಗ್ಗೆ ಪೀಠ, "ನಮ್ಮಲ್ಲಿ ಕೆಲವು ಪ್ರಶ್ನೆಗಳಿವೆ. ಪೆಗಾಸಸ್ ಗೂಢಚರ್ಯೆ ಬಗೆಗಿನ ವರದಿಗಳಲ್ಲಿ ಸತ್ಯಾಂಶವಿದ್ದಲ್ಲಿ ಇದು ಗಂಭೀರವಾದ ಆರೋಪ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ" ಎಂದಿದ್ದಾರೆ.
ಇದೇ ರೀತಿಯಾದ ವಿಚಾರ 2019ರಲ್ಲಿ ಬೆಳಕಿಗೆ ಬಂದಿತ್ತು. ಆದರೆ, ಇಷ್ಟು ವಿಳಂಬವಾಗಲು ಕಾರಣ ಏನು ಎಂದು ಕೇಳಿದ ಪೀಠ, "ವಿಚಾರಣೆಗೆ ವಿಳಂಬ ಅಡ್ಡಿಯಾಗಲಾರದು" ಎಂದಿದೆ.
"ಪ್ರತೀ ಪ್ರಕರಣಗಳನ್ನು ಗಣನೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವಶ್ಯಕತೆ ಇರುವವರು ದೂರುಗಳನ್ನು ಟೆಲಿಗ್ರಾಫ್ ಕಾಯ್ದೆಯಡಿ ಸಲ್ಲಿಸಬಹುದು" ಎಂದು ಪೀಠ ತಿಳಿಸಿದೆ.
ಈ ವೇಳೆ ಪ್ರತಿಕ್ರಿಯಿಸಿದ ಕಪಿಲ್ ಸಿಬಲ್, "ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಹತ್ತು ಪ್ರಕರಣಗಳ ಬಗ್ಗೆ ಮಾಹಿತಿ ಇದೆ" ಎಂದಿದ್ದಾರೆ.
ಭಾರತೀಯ ಸಂಪಾದಕರ ಕೂಟ, ಹಿರಿಯ ಪತ್ರಕರ್ತರು ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆಗೆ ಕೋರಿ ಸಲ್ಲಿಸಿರುವ ಅರ್ಜಿ ಸೇರಿ 9 ಅರ್ಜಿಗಳನ್ನು ಪೀಠ ವಿಚಾರಣೆ ನಡೆಸುತ್ತಿದೆ.