ಮೈಸೂರು, ಆ 05 (DaijiworldNews/PY): ರಾಜ್ಯದ ಸಚಿವ ಸಂಪುಟವನ್ನು ನೋಡಿದರೆ ಸಿಎಂ ಬಸವರಾಜ ಬೊಮ್ಮಾಯಿ ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಟ್ವೀಟ್ಗೆ ತಿರುಗೇಟು ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪ, "ಸಿದ್ದರಾಮಯ್ಯ ಒಂಥರ ಹಸಿವಿನಿಂದ ಒದ್ದಾಡುತ್ತಿರುವ ಇಲಿ ರೀತಿ ಆಗಿದ್ದಾರೆ" ಎಂದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹಸಿವಿಂದ ಒದ್ದಾಡು ಇಲಿ ರೀತಿ ಆಗಿದ್ದಾರೆ ಸಿದ್ದರಾಮಯ್ಯ. ಸಿದ್ದರಾಮಯ್ಯ ಹುಲಿ ಆಗುತ್ತಾರೆ ಎಂದು ಭಾವಿಸಿದ್ದೆವು. ಆದರೆ, ಇವು ಇಲಿಯಾಗಿ ವಿಲ ವಿಲ ಒದ್ದಾಡುತ್ತಿದ್ದಾರೆ. ಸಿದ್ದರಾಮಯ್ಯ ರಾಜ್ಯಕ್ಕೆ ಹುಲಿಯಾಗುವ ಬದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಹುಲಿಯಾಗಿದ್ದಾರೆ" ಎಂದು ಹೇಳಿದ್ದಾರೆ.
"ಕಳೆದ ಎರಡು ಬಾರಿ ಚುನಾವಣೆಯಲ್ಲಿ ಡಾ.ಜಿ ಪರಮೇಶ್ವರ್ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ. ಪರಮೇಶ್ವರ್ ಸಿಎಂ ಸ್ಥಾನಕ್ಕೆ ಅಡ್ಡಿಯಾಗುತ್ತಾರೆ ಎನ್ನುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದರು. ಒಬ್ಬ ಕುರುಬನನ್ನು ಸಿದ್ದರಾಮಯ್ಯ ಬೆಳೆಸಲಿಲ್ಲ. ಕೆಲವು ಕುರುಬರನ್ನು ನೆಪಕ್ಕಾಗಿ ಮಾತ್ರವೇ ಸಚಿವರನ್ನಾಗಿ ನೇಮಿಸಿದ್ದರು. ಸಿದ್ದರಾಮಯ್ಯ ಪೂರ್ಣಾವಧಿಯಲ್ಲಿ ಯಾರಿಗೂ ಕೂಡಾ ಸಚಿವ ಸ್ಥಾನ ಕೊಟ್ಟಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಬಿಜೆಪಿಯಲ್ಲಿ ಮುಂದಿನ ಬಾರಿ ರಾಷ್ಟ್ರೀಯವಾದಿ ಸಿಎಂ ಆಗುತ್ತಾರೆ. ನಾನು ಸಿಎಂ, ಉಪಮುಖ್ಯಮಂತ್ರಿ ಆಗಬೇಕು ಎಂದು ಬೆಂಬಲಿಗರು ಬಯಸಿದ್ದರು. ಆದರೆ, ಸಚಿವನೂ ಆಗುವುದಿಲ್ಲ ಎಂದು ಕೆಲವರು ಬಿಂಬಿಸಿದ್ದರು. ನನ್ನನ್ನು ಹೈಕಮಾಂಡ್ ಹೇಗೆ ಬಿಂಬಿಸಿದೆ ಎಂದು ಎಲ್ಲರಿಗೂ ಈಗ ತಿಳಿದಿದೆ. ನಾವು ಮುಂಬರುವ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ. ಮುಂದಿನ ಬಾರಿ ರಾಷ್ಟ್ರವಾದಿಯನ್ನು ಬಿಜೆಪಿ ಮುಖ್ಯಮಂತ್ರಿ ಮಾಡುತ್ತೆ" ಎಂದಿದ್ದಾರೆ.
"ಹಿಂದುಳಿದವರಿಗೆ ನಮ್ಮಲ್ಲಿ ಹೆಚ್ಚಿನ ಅವಕಾಶ ನೀಡಲಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುತ್ತೇವೆ. ಈವರೆಗೆ ಯಾವತ್ತೂ ಬಿಜೆಪಿಗೆ ಪೂರ್ಣ ಪ್ರಮಾಣದಲ್ಲಿ ಬಹುಮತ ಬಂದಿಲ್ಲ. ಕಾಂಗ್ರೆಸ್, ಜೆಡಿಎಸ್ ಅವರನ್ನು ಸೇರಿಸಿಕೊಂಡು ಅಡಳಿತ ಮಾಡಿದ್ದೇವೆ. ಇದರಿಂದ ಸಣ್ಣ-ಪುಟ್ಟ ಗೊಂದಲಗಳಿದ್ದವು. ಮುಂದೆ ಈ ರೀತಿ ಆಗುವುದಿಲ್ಲ" ಎಂದು ತಿಳಿಸಿದ್ದಾರೆ.