ಬೆಂಗಳೂರು, ಆ 05 (DaijiworldNews/PY): ಕೆಪಿಸಿಸಿಗೆ ಪದಾಧಿಕಾರಿಗಳ ನೇಮಕ ವಿಳಂಬವಾಗುತ್ತಿರುವ ಬಗ್ಗೆ ರಾಜ್ಯ ಬಿಜೆಪಿ ಲೇವಡಿ ಮಾಡಿದ್ದು, "ಅಧಿಕಾರ ಸ್ವೀಕರಿಸಿ ವರ್ಷವಾದರೂ ಮಹಾನಾಯಕ ಇನ್ನೂ ಏಕಾಂಗಿಯಾಗಿಯೇ ಉಳಿದಿದ್ದಾರೆ. ಪದಾಧಿಕಾರಿಗಳನ್ನು ನೇಮಿಸಿಕೊಳ್ಳಲಾರದೇ ಪರದಾಡುತ್ತಿದ್ದಾರೆ" ಎಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, "ಎಐಸಿಸಿಗೆ ಹಂಗಾಮಿ ಅಧ್ಯಕ್ಷರು ಕಾಯಂ ಆಗಿದ್ದಾರೆ. ಏಕೆಂದರೆ ಕುಟುಂಬದ ಅಧಿಕಾರ ಕಾಪಾಡಿಕೊಳ್ಳುವುದಕ್ಕೆ ಇರುವುದು ಅದೊಂದೇ ದಾರಿ. ಆದರೆ ಕೆಪಿಸಿಸಿ ಅಧ್ಯಕ್ಷರಿಗೆ ಏನಾಗಿದೆ ? ಅಧಿಕಾರ ಸ್ವೀಕರಿಸಿ ವರ್ಷವಾದರೂ ಮಹಾನಾಯಕ ಇನ್ನೂ ಏಕಾಂಗಿಯಾಗಿಯೇ ಉಳಿದಿದ್ದಾರೆ. ಪದಾಧಿಕಾರಿಗಳನ್ನು ನೇಮಿಸಿಕೊಳ್ಳಲಾರದೇ ಪರದಾಡುತ್ತಿದ್ದಾರೆ" ಎಂದಿದೆ.
"ಪದಾಧಿಕಾರಿಗಳ ನೇಮಕಕ್ಕೂ ಪರಿತಪಿಸುತ್ತಿರುವ ಡಿ.ಕೆ ಶಿವಕುಮಾರ್ ಅವರ ಸುತ್ತಲೂ ಶತ್ರುಗಳು ತುಂಬಿಕೊಂಡಿದ್ದಾರೆ. ಐವರು ಕಾರ್ಯಾಧ್ಯಕ್ಷರ ನೇಮಕವಾಗುವಂತೆ ನೋಡಿಕೊಳ್ಳುವ ಮೂಲಕ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷರ ಕೈ ಕಟ್ಟಿ ಹಾಕಿದ್ದಾರೆ. ರಾಹುಲ್ ಗಾಂಧಿಯ ಎದುರು ಕಣ್ಣೀರಿಟ್ಟರೂ ಪ್ರಯೋಜನವಿಲ್ಲದಂತಾಗಿದೆ" ಎಂದು ವ್ಯಂಗ್ಯವಾಡಿದೆ.
"ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಎಂದು ಶಾಸಕರು ಹೇಳಿಕೆ ನೀಡಿದಾಗ ಡಿಕೆಶಿ ಅವರು ಬೆವೆತು ಹೋಗಿದ್ದರು. ಕೆಪಿಸಿಸಿ ಸಾರಥ್ಯ ವಹಿಸಿ ವರ್ಷ ಕಳೆದ ಮೇಲೂ ಮಹಾನಾಯಕನ ಪರವಾಗಿ ವಾದಿಸುವುದಕ್ಕೆ ಇದಿದ್ದು ನೆಂಟರು ಮಾತ್ರ. ರಾಜ್ಯ ಕಾಂಗ್ರೆಸ್ ಘಟಕ ಕಂಡ ದುರ್ಬಲ ಮತ್ತು ಅಸಹಾಯಕ ಸಾರಥಿ ಎಂದರೆ ಡಿಕೆಶಿ!" ಎಂದು ಲೇವಡಿ ಮಾಡಿದೆ.