ನವದೆಹಲಿ, ಆ 05 (DaijiworldNews/MS): ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಬಗ್ಗೆ ನವದೆಹಲಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಇಡಿ ದಾಳಿ ಖಂಡನೀಯ. ಇದು ಒಂದು ವರ್ಗವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ ಕಾನೂನು ಹೋರಾಟ ಮಾಡಲು ಜಮೀರ್ ಸಮರ್ಥರಿದ್ದಾರೆ. ಇಡಿ ವಿಚಾರಣೆಗೆ ಸಹಕಾರ ನೀಡಿದ್ದಾಗಿ ಜಮೀರ್ ಹೇಳಿದ್ದಾರೆ. ಈ ಸಮಯದಲ್ಲಿ ಇಡಿ ದಾಳಿ ಅಗತ್ಯವಿತ್ತೇ ಎಂದು ಅವರು ಪ್ರಶ್ನಿಸಿದ್ದಾರೆ.
ಇಡಿ ದಾಳಿಯಿಂದ ಜಮೀರ್ಗೆ ಕಿರುಕುಳವಾಗುತ್ತಿದೆ. ಕಾಂಗ್ರೆಸ್ ಗೊಂದು ನ್ಯಾಯ ಬಿಜೆಪಿಗೊಂದು ನ್ಯಾಯ ಯಾಕೆ. ಅಧಿಕಾರ ಇದೆ ಅಂತಾ ದುರುಪಯೋಗ ಪಡಿಸಕೊಳ್ಳತ್ತಾ ಇದ್ದಾರೆ. ಬಿಜೆಪಿಯವರು ಬಹಳ ಪವಿತ್ರವಾಗಿದ್ದೀರಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಭವ್ಯವಾದ ಬಂಗಲೆ, ಕಚೇರಿ ಸೇರಿ ಐದಾರು ಕಡೆಗಳಲ್ಲಿ ಇಂದು ಬೆಳಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಐಟಿ ದಾಳಿ ನಡೆಸಿದ್ದರು ಎನ್ನಲಾಗಿತ್ತು. ಆದರೆ ಬಳಿಕ ದೊರೆತ ಮಾಹಿತಿಯಂತೆ ಶಾಸಕ ಜಮೀರ್ ಅಹಮ್ಮದ್ ಮನೆ ಮೇಲೆ ನಡೆದಿರುವುದು ಐಟಿ ದಾಳಿ ಅಲ್ಲ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಐಎಂಎ ಅವ್ಯವಹಾರ ಪ್ರಕರಣದಲ್ಲಿ ಪ್ರಧಾನ ವಂಚಕ ಮನ್ಸೂರ್ , ಶಾಸಕ ಜಮೀರ್ ಮತ್ತು ರೋಷನ್ ಬೇಗ್ ಅವರುಗಳ ಹೆಸರುಗಳನ್ನು ಪ್ರಸ್ತಾಪಿಸಿದ್ದ. ಹಾಗಾಗಿ ಇವರಿಬ್ಬರ ಮನೆಗಳು ಮೇಲೆ ಇಡಿ ದಾಳಿ ನಡೆದಿದೆ ಎಂದು ಹೇಳಲಾಗಿದೆ.