ಬೆಂಗಳೂರು, ಆ 05 (DaijiworldNews/PY): ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸಚಿವ ಸಂಪುಟ ಸೇರಿದ 29 ಮಂತ್ರಿಗಳ ಪೈಕಿ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಅವರು ಶ್ರೀಮಂತ ಸಚಿವರಾಗಿದ್ದಾರೆ.
1195.81 ಕೋಟಿ ರೂ. ಆಸ್ತಿ ಹೊಂದಿರುವ ಎಂಟಿಬಿ ನಾಗರಾಜ್ ಅವರು ಸಿಎಂ ಬೊಮ್ಮಾಯಿ ಸಂಪುಟದ ಅತ್ಯಂತ ಶ್ರೀಮಂತ ಸಚಿವರಾಗಿದ್ದಾರೆ. ಇವರಲ್ಲದೇ ಇನ್ನಿಬ್ಬರು ಸಚಿವರಾದ ವಿಜಯನಗರ ಶಾಸಕ ಆನಂದ್ ಸಿಂಗ್ ಬಳಿ 176.58 ಕೋಟಿ ರೂ. ಆಸ್ತಿ ಇದ್ದರೆ, ಕೆ.ಆರ್. ಪುರಂ ಶಾಸಕ ಬೈರತಿ ಬಸವರಾಜ್ 118.35 ಕೋಟಿ ರೂ. ಆಸ್ತಿ ಹೊಂದಿದ್ದಾರೆ.
ಕೋಟ ಶ್ರೀನಿವಾಸ್ ಪೂಜಾರಿ ಅವರು ಕಡಿಮೆ ಆಸ್ತಿ ಹೊಂದಿರುವ ಸಚಿವರಾಗಿದ್ದಾರೆ. 2015ರಲ್ಲಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಸಂದರ್ಭ ಇವರು ಸಲ್ಲಿಸಿರುವ ಅಫಿಡವಿಟ್ ಪ್ರಕಾರ, 69.59 ಲಕ್ಷ ರೂ. ಆಸ್ತಿಯನ್ನು ಹೊಂದಿದ್ದಾರೆ.
ಸುಳ್ಯ ಶಾಸಕ ಎಸ್. ಅಂಗಾರ ಅವರು 1.09 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಇನ್ನು ಆರಗ ಜ್ಞಾನೇಂದ್ರ, ವಿ. ಸುನಿಲ್ ಕುಮಾರ್ ಹಾಗೂ ಗೋವಿಂದ ಕಾರಜೋಳ ಅವರು 2 ಕೋಟಿ ಗೂ ಅಧಿಕ ಆಸ್ತಿ ಹೊಂದಿದ್ದಾರೆ.
ಸಿಎಂ ಬೊಮ್ಮಾಯಿ ಅವರ ಸಂಪುಟದಲ್ಲಿ ಇಬ್ಬರು ಎಂಬಿಬಿಎಸ್ ಪದವಿ ಪಡೆದ ಸಚಿವರಿದ್ದಾರೆ. ಮಲ್ಲೇಶ್ವರಂ ಶಾಸಕ ಡಾ. ಸಿ.ಎನ್ ಅಶ್ವತ್ಥ ನಾರಾಯಣ ಹಾಗೂ ಚಿಕ್ಕಮಗಳೂರು ಶಾಸಕ ಡಾ.ಕೆ. ಸುಧಾಕರ್.
ಬೊಮ್ಮಾಯಿ ಸಚಿವ ಸಂಪುಟದಲ್ಲಿ 15 ಪದವೀಧರ ಸಚಿವರಿದ್ದರೆ, ಈ ಪೈಕಿ ನಾಲ್ವರು ಎಂಜಿನಿಯರಿಂಗ್ ಪದವೀಧರರು, ಇಬ್ಬರು ಡಿಪ್ಲೊಮಾ ಪೂರ್ಣಗೊಳಿಸಿದ್ದಾರೆ. ನಾಲ್ವರು ಪಿಯುಸಿವರೆ ಶಿಕ್ಷಣ ಪಡೆದಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ 7ನೇ ತರಗತಿವರೆಗಿನ ಶಿಕ್ಷಣ ಪಡೆದಿದ್ದರೆ, ಸುಳ್ಯದ ಎಸ್. ಅಂಗಾರ ಹಾಗೂ ಎಂಟಿಬಿ ನಾಗರಾಜ್ 8ನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಪಡೆದಿದ್ದಾರೆ.