ನವದೆಹಲಿ, ಆ 05 (DaijiworldNews/PY): ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪ್ರಧಾನ ಸಲಹೆಗಾರ ಸ್ಥಾನಕ್ಕೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ಅಮರಿಂದರ್ ಸಿಂಗ್ ಅವರಿಗೆ ಪತ್ರ ಬರೆದಿರುವ ಕಿಶೋರ್, "ಸಾರ್ವಜನಿಕ ಜೀವನದಲ್ಲಿ ಸಕ್ರಿಯನಾಗುವ ನಿಟ್ಟಿನಲ್ಲಿ ತಾತ್ಕಾಲಿಕ ವಿರಾಮ ತೆಗೆದುಕೊಳ್ಳಲು ಇಚ್ಛಿಸುತ್ತೇನೆ" ಎಂದು ಉಲ್ಲೇಖಿಸಿರುವುದಾಗಿ ವರದಿಯಾಗಿದೆ.
"ಸದ್ಯ ಭವಿಷ್ಯದ ಬಗ್ಗೆ ಏನೂ ಯೋಚನೆ ಮಾಡಿಲ್ಲ. ಮುಂದೆ ಕೂಡಾ ರಾಜಕೀಯದೊಂದಿಗೆ ಇರುತ್ತೇನೋ ಅಥವಾ ಇಲ್ಲವೋ ಎನ್ನುವ ಬಗ್ಗೆ ಸ್ಪಷ್ಟವಾದ ತೀರ್ಮಾನಕ್ಕೆ ಬಂದಿಲ್ಲ ಎಂದಿದ್ದಾರೆ" ಎಂದು ವರದಿಯಾಗಿದೆ.
"ಸಾರ್ವಜನಿಕ ಜೀವನದಲ್ಲಿ ಸಕ್ರಿಯನಾಗುವ ನಿಟ್ಟಿನಲ್ಲಿ ತಾತ್ಕಾಲಿಕ ವಿರಾಮ ತೆಗೆದುಕೊಳ್ಳುವ ನನ್ನ ತೀರ್ಮಾನದ ದೃಷ್ಟಿಯಿಂದ, ಪ್ರಧಾನ ಸಲಹೆಗಾರನ ಜವಾಬ್ದಾರಿಯಿಂದ ಹೊರಬರಲು ಬಯಸಿದ್ದೇನೆ. ನಾನು ನನ್ನ ಮುಂದಿನ ಕ್ರಮದ ಬಗ್ಗೆ ಇನ್ನೂ ನಿರ್ಧರಿಸಿದೇ ಇರುವ ಕಾರಣ, ನನ್ನನ್ನು ಈ ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ವಿನಂತಿಸುತ್ತೇನೆ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರಶಾಂತ್ ಕಿಶೋರ್ ಅವರು ಇತ್ತೀಚೆಗೆ ಕಾಂಗ್ರೆಸ್ ನಾಯ ರಾಹುಲ್ ಗಾಂಧಿ ಜೊತೆ ರಹಸ್ಯ ಸಭೆಯಲ್ಲಿ ಮಾತನಾಡಿದ್ದು, ರಾಷ್ಟ್ರೀಯ ಕಾಂಗ್ರೆಸ್ಗೆ ಸೇರ್ಪಡೆಯಾಗುವ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಪಕ್ಷಕ್ಕೆ ಪ್ರಶಾಂತ್ ಕಿಶೋರ್ ಅವರು ಸೇರ್ಪಡೆಗೊಂಡರೆ ಹೇಗೆ? ನಮ್ಮ ಪಕ್ಷದ ನೀತಿ, ಸಿದ್ದಾಂತಗಳಿಗೆ ಅವರು ಒಪ್ಪುತ್ತಾರೆಯೇ ಎಂದು ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ನಲ್ಲಿ ಚರ್ಚೆ ನಡೆಸಿರುವುದಾಗಿ ಹೆಸರನ್ನು ಬಹಿರಂಗ ಪಡಿಸಲು ಇಚ್ಛಿಸದ ಕೆಲ ಹಿರಿಯ ಕಾಂಗ್ರೆಸ್ ನಾಯಕರು ಹೇಳಿರುವುದಾಗಿ ಇತ್ತೀಚೆಗೆ ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದವು.