ಬೆಂಗಳೂರು, ಆ 02 (DaijiworldNews/SM): ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಸಂಪುಟಕ್ಕೆ ನೂತನ ಸಚಿವರ ಸೇರ್ಪಡೆಯಾಗಿದ್ದು, ಇದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ದೆಹಲಿಯಲ್ಲಿ ಪಕ್ಷದ ಹೈಕಮಾಂಡ್ ಜೊತೆಗಿನ ಮೂರು ದಿನಗಳ ನಿರಂತರ ಚರ್ಚೆ-ಸಮಾಲೋಚನೆಗಳ ನಂತರ ರಚನೆಯಾದ ರಾಜ್ಯದ ಸಚಿವ ಸಂಪುಟವನ್ನು ನೋಡಿದರೆ ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, ಈಗಾಗಲೇ ಭುಗಿಲೆದ್ದಿರುವ ಭಿನ್ನಮತವನ್ನು ನೋಡಿದರೆ ಶೀಘ್ರದಲ್ಲಿಯೇ ಮಧ್ಯಂತರ ಚುನಾವಣೆ ಎದುರಾಗಬಹುದು ಎಂದಿದ್ದಾರೆ.
ದಲಿತ ಸಮುದಾಯದ ಉದ್ಧಾರಕ್ಕೆ ಅವತಾರ ಎತ್ತಿಬಂದಂತೆ ಇತ್ತೀಚಿನ ದಿನಗಳಲ್ಲಿ ಮಾತನಾಡುತ್ತಿರುವ ರಾಜ್ಯ ಸಚಿವಸಂಪುಟ ರಚನೆಯಲ್ಲಿ ದಲಿತ ಸಮುದಾಯವನ್ನು ಸಂಪೂರ್ಣ ಕಡೆಗಣಿಸಿದೆ. ರಾಜ್ಯದ ಶೇಕಡಾ 24ರಷ್ಟು ಜನಸಂಖ್ಯೆ ಇರುವ ಪರಿಶಿಷ್ಟ ಜಾತಿ-ಪಂಗಡ ಸಮುದಾಯಕ್ಕೆ ಕೇವಲ 4 ಸಚಿವರನ್ನು ನೀಡಿ ಅನ್ಯಾಯ ಎಸಗಿದೆ ಎಂದು ಟ್ವೀಟ್ ಮಾಡಿದ್ದಾರೆ.