ಬೆಂಗಳೂರು, ಆ 04 (DaijiworldNews/PY): "ಸಚಿವ ಸಂಪುಟ ರಚನೆ ಸಂದರ್ಭ ಈ ರೀತಿಯಾದ ಅಸಮಾಧಾನಗಳು ಸಹಜ. ನಮ್ಮಲ್ಲಿ ಯಾವುದೇ ಪರ ಹಾಗೂ ವಿರೋಧ ಬಣಗಳು ಇಲ್ಲ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, "ಮಾಜಿ ಸಿಎಂ ಯಡಿಯೂರಪ್ಪ ಅವರ ಮಾರ್ಗದರ್ಶನ, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಹೊಸದಾಗಿ ಸಚಿವ ಸಂಪುಟ ರಚನೆ ಮಾಡಲಾಗಿದೆ. ಪ್ರಾದೇಶಿಕ ಹಾಗೂ ಭೌಗೋಳಿಕ ಆಧಾರದ ಮೇಲೆ ಸ್ಥಾನಗಳನ್ನು ನೀಡಲಾಗಿದೆ. ಯಾವುದೇ ಸರ್ಕಾರ ಹೊಸದಾಗಿ ಸಚಿವ ಸಂಪುಟ ರಚನೆ ಮಾಡಿದ ಸಂದರ್ಭ ಈ ರೀತಿಯಾದ ಅಸಮಾಧಾನಗಳು ಸಹಜ" ಎಂದಿದ್ದಾರೆ.
ಹಿರಿಯರನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಮುಂಬರುವ ಚುನಾವಣೆಗೆ ಅಗತ್ಯ ಇರುವ ದೃಷ್ಟಿಯಿಂದ ಕೆಲವರನ್ನು ಸಂಪುಟದಿಂದ ಕೈಬಿಡಲಾಗಿದೆ. ನಮ್ಮಲ್ಲಿ ಯಾವುದೇ ಪರ ಹಾಗೂ ವಿರೋಧಿ ಬಣ ಇಲ್ಲ" ಎಂದು ತಿಳಿಸಿದ್ದಾರೆ.