ಮೈಸೂರು, ಆ 04 (DaijiworldNews/PY): "ಆಗಿರೋ ಅನ್ಯಾಯವನ್ನು ಸವಾಲಾಗಿ ಸ್ವೀಕಾರ ಮಾಡುತ್ತೇನೆ. ನಾನು ನೋವಿನಲ್ಲಿ ಇಲ್ಲ. ಮಂತ್ರಿ ಸ್ಥಾನ ಇಲ್ಲದಿದ್ದರೂ ಕೆಲಸ ಮಾಡುತ್ತೇನೆ" ಎಂದು ಶಾಸಕ ಎಸ್.ಎ ರಾಮದಾಸ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನೂತನ ಸಚಿವರ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಆದರೆ, ಕೊನೆ ಕ್ಷಣದಲ್ಲಿ ನನ್ನ ಹೆಸರು ಏಕೆ ಮಿಸ್ ಆಗಿದೆ ಎಂದು ತಿಳಿದಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ಅವರು ಕಳೆದ ವಾರ 17 ಶಾಸಕರ ಮುಂದೆ ನನ್ನನ್ನು ಹೊಗಳಿದ್ದರು. ರಾಮ್ದಾಸ್ ಅವರ ಬಳಿ ಎಲ್ಲರೂ ಆಡಳಿತ ಮಾಡುವುದನ್ನು ಕಲಿಯಿರಿ ಎದು ಹೇಳಿದ್ದರು. ಸಚಿವ ಸ್ಥಾನಕ್ಕಿಂತ ಈ ವಿಚಾರ ದೊಡ್ಡದು" ಎಂದಿದ್ದಾರೆ.
"ನನ್ನ ತಂದೆ ಸೈನಿಕ, ಸೈನಿಕನ ರಕ್ತ ನನ್ನ ಮೈಯಲ್ಲಿ ಹರಿಯುತ್ತಿದೆ. ನಾನು ಯಾವುದಕ್ಕೂ ಬೇಸರ ಪಟ್ಟುಕೊಳ್ಳುವುದಿಲ್ಲ. ಆಗಿರುವ ಅನ್ಯಾಯವನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಅಸಮಾಧಾನ ಹಾಗೂ ಬೇಸರ ಎಲ್ಲವೂ ಸಾಮಾನ್ಯ" ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿದ್ದ ಅವರು, "ಪಕ್ಷ ಕಟ್ಟಿ ಬೆಳೆಸಿ, ಅರ್ಹತೆ ಹೊಂದಿ ಸಚಿವರಾಗಿ ಪ್ರಮಾಣವಚನ ತೆಗೆದುಕೊಳ್ಳುತ್ತಿರುವ ನೂತನ ಸಚಿವರಿಗೆ ಅಭಿನಂದನೆಗಳು. ಕರ್ನಾಟಕವನ್ನು ದೇಶದಲ್ಲಿ ನಂ.1 ಮಾಡಲು ತಾವೆಲ್ಲ ಶ್ರಮಿಸುತ್ತೀರೆಂದು ನಂಬಿರುತ್ತೇನೆ. ತಮ್ಮೆಲ್ಲರಿಗೂ ತಾಯಿ ಚಾಮುಂಡೇಶ್ವರಿ ಶುಭವನ್ನುಂಟುಮಾಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ವ್ಯಂಗ್ಯವಾಡಿದ್ದಾರೆ.