ಬೆಂಗಳೂರು, ಆ 04 (DaijiworldNews/PY): "ಪಕ್ಷ ನನಗೆ ತಾಯಿ ಸಮಾನ, ನನ್ನ ಪಕ್ಷ, ಸಂಘಟನೆ ಹಾಗೂ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ದ" ಎಂದು ಸಚಿವ ಸ್ಥಾನ ನಿರೀಕ್ಷೆಯಲ್ಲಿದ್ದ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ತಿಳಿಸಿದ್ದಾರೆ.
ಸಚಿವ ಸ್ಥಾನ ಸಿಗುತ್ತದೆ ಎನ್ನುವ ನಿರೀಕ್ಷೆ ಹೊಂದಿದ್ದ ರೇಣುಕಾಚಾರ್ಯ ಅವರಿಗೆ ಅವಕಾಶ ಸಿಕ್ಕಿಲ್ಲ. ಈ ಹಿನ್ನೆಲೆ ಅವರ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಪಕ್ಷ ನನಗೆ ತಾಯಿ ಸಮಾನ, ನನ್ನ ಪಕ್ಷ, ಸಂಘಟನೆ ಹಾಗೂ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ದ. ಜನ ಸೇವೆಯೇ ನನ್ನ ಕಾಯಕ, ನನ್ನ ಸಂಪೂರ್ಣ ಜೀವನವನ್ನು ನನ್ನ ಮತ ಕ್ಷೇತ್ರದ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಜನತೆಯ ಸೇವೆಗೆ ಮುಡಿಪಿಟ್ಟಿದ್ದೇನೆ" ಎಂದಿದ್ದಾರೆ.
"ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ನಿರಾಶರಾಗದೆ ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಪಕ್ಷ ಸಂಘಟಿಸಲು ವಿನಂತಿಸುತ್ತೇನೆ" ಎಂದು ಮನವಿ ಮಾಡಿದ್ದಾರೆ.