ಬೆಳಗಾವಿ, ಆ 04 (DaijiworldNews/PY): "ಸಚಿವ ಸ್ಥಾನ ಸಿಗದಿದ್ದರೆ ವಿಧಾನಸಭೆ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೆಗೆ ನಾನೂ ಈಗಲೂ ಬದ್ದ" ಎಂದು ಸವದತ್ತಿ-ಯಲ್ಲಮ್ಮ ಕ್ಷೇತ್ರದ ಶಾಸಕ ಆನಂದ ಮಾಮನಿ ಹೇಳಿದ್ದಾರೆ.
"ವಿಧಾನಸಭೆ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದರಿಂದ ಹಿಂದೆ ಸರಿಯುವುದಿಲ್ಲ. ಆದರೆ, ರಾಜೀನಾಮೆ ಬುಧವಾರವೇ ನೀಡುವುದಿಲ್ಲ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ಹಿರಿಯ ಮುಖಂಡರ ಜೊತೆ ಚರ್ಚೆ ನಡೆಸುತ್ತೇನೆ. ನಂತರ ಕ್ಷೇತ್ರದ ಮತದಾರರು ಸೇರಿದಂತೆ ಕಾರ್ಯಕರ್ತರು ಹಾಗೂ ಹಿತೈಷಿಗಳ ಜೊತೆ ಚರ್ಚೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ" ಎಂದಿದ್ದಾರೆ.
"ನನಗೆ ಈವರೆಗೂ ಸಿಎಂ ಕಚೇರಿಯಿಂದ ಕರೆ ಬಂದಿಲ್ಲ" ಎಂದು ತಿಳಿಸಿದ್ದಾರೆ.
"2008ರಿಂದ ಸತತವಾಗಿ ಮೂರು ಬಾರಿ ಗೆದ್ದು, ಶಾಸಕನಾಗಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಿದ್ದೇನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಶ್ರಮಿಸಿದ್ದೇನೆ. ಅಲ್ಲದೇ, ನಾನು ಪಕ್ಷಕ್ಕಾಗಿಯೂ ದುಡಿದಿದ್ದೇನೆ. ಈ ಬಾರಿ ಸಚಿವ ಸ್ಥಾನ ನೀಡಬೇಕು ಎನ್ನುವುದು ನನ್ನ ಒತ್ತಾಯ ಹಾಗೆಯೇ ಕ್ಷೇತ್ರದ ಜನರ ಬಯಕೆಯೂ ಆಗಿದೆ" ಎಂದಿದ್ದಾರೆ.