ಬೆಂಗಳೂರು, ಆ 04 (DaijiworldNews/MS): ಕೊನೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ನೇತೃತ್ವದ ಸರಕಾರದ ನೂತನ ಸಚಿವ ಸಂಪುಟ ರಚನೆಗೆ ಮುಹೂರ್ತ ನಿಗದಿಯಾಗಿದ್ದು , ಇಂದು ಮಧ್ಯಾಹ್ನ ೨.೧೫ ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ರಾಜಭವನದಿಂದ ಬೆಳಗ್ಗೆ 11.30ರ ಒಳಗೆ ನೂತನ ಸಚಿವರ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗಲಿದೆ.
ಇನ್ನು ನವದೆಹಲಿಯಿಂದ ಮರಳಿದ ಬೊಮ್ಮಾಯಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದು, ಈಗಾಗಲೇ ಮಾಧ್ಯಮಗಳಲ್ಲಿ ಸಂಭಾವ್ಯ ಸಚಿವರ ಹೆಸರುಗಳು ಕೇಳಿಬರುತ್ತಿವೆ. ಹೀಗಾಗಿ ನಾನು ಈ ಬಗ್ಗೆ ಏನನ್ನು ಹೇಳುವುದಿಲ್ಲ. ರಾಜಭವನದಿಂದಲೇ ಬಿಡುಗಡೆಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅರವಿಂದ ಲಿಂಬಾವಳಿ, ಶ್ರೀರಾಮುಲು, ಗೋವಿಂದ ಕಾರಜೋಳ, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಪೂರ್ಣಿಮಾ ಶ್ರೀನಿವಾಸ್, ಅಶ್ವತ್ಥ್ ನಾರಾಯಣ, ಉಮೇಶ್ ಕತ್ತಿ, ಡಾ.ಕೆ.ಸುಧಾಕರ್, ಕೆ.ಎಸ್.ಈಶ್ವರಪ್ಪ, ಎಸ್.ಅಂಗಾರ, ಆರಗ ಜ್ಞಾನೇಂದ್ರ, ಆನಂದ್ ಸಿಂಗ್, ವಿ.ಸೋಮಣ್ಣಗೆ ಸಚಿವ ಸ್ಥಾನ ದೊರಕುವ ಸಾಧ್ಯತೆ ಇದೆ.