ನವದೆಹಲಿ, ಆ 04 (DaijiworldNews/MS): ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ದೇಶದ ಯಾವೊಬ್ಬ ನಾಗರಿಕರು ಹಸಿವಿನಿಂದ ಬಳಲುತ್ತಿಲ್ಲ ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತವು ವೇಗವಾಗಿ ಉದ್ದೇಶಿತ 50 ಕೋಟಿ ಮಂದಿಗೆ ಲಸಿಕೆಗಳ ಮೈಲಿಗಲ್ಲನ್ನು ತಲುಪುತ್ತಿದೆ, ಬಡವರ ಸಬಲೀಕರಣವು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಒತ್ತಿ ಹೇಳಿದರು.
ಇಡೀ ಜಗತ್ತು ಗರೀಬ್ ಕಲ್ಯಾಣ್ ಯೋಜನೆಯ ಬಗ್ಗೆ ಕುತೂಹಲದಿಂದ ಗಮನಿಸುತ್ತಿದೆ ಎಂದು ಹೇಳಿದ ಪ್ರಧಾನಿ, ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆಯ ಜೊತೆಗೆ 80 ಕೋಟಿ ಜನರು ಎರಡು ಉಚಿತ ಪಡಿತರ, ಉಚಿತ ಧಾನ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು. ಈ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ 2 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ ಎಂದು ಅವರು ಹೇಳಿದರು.
ನಿನ್ನೆ ಪ್ರಧಾನ ಮಂತ್ರಿ ದೆಹಲಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಗರೀಬ್ ಕಲ್ಯಾಣ ಯೋಜನೆಯ ಗುಜರಾತ್ ರಾಜ್ಯದ ವಿವಿಧ ಭಾಗದ ಫಲಾನುಭವಿಗಳ ಜೊತೆ ಮಾತನಾಡಿದರು. ಸ್ವಾತಂತ್ರ್ಯದ ನಂತರ, ಪ್ರತಿಯೊಂದು ಸರ್ಕಾರವೂ ಬಡವರಿಗೆ ಅಗ್ಗದ ಆಹಾರವನ್ನು ಒದಗಿಸುವ ಬಗ್ಗೆ ಮಾತನಾಡಿದೆ. ಪಡಿತರ ಯೋಜನೆಗಳ ವ್ಯಾಪ್ತಿ ಮತ್ತು ಬಜೆಟ್ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ, ಆದರೆ ಇದರ ಪರಿಣಾಮವು ಸೀಮಿತ ವರ್ಗಕ್ಕೆ ಮಾತ್ರ ತಲುಪಿದೆ. ದೇಶದ ಆಹಾರ ದಾಸ್ತಾನು ಹೆಚ್ಚುತ್ತಲೇ ಇತ್ತು, ಆದರೆ ಹಸಿವು ಮತ್ತು ಅಪೌಷ್ಟಿಕತೆಯು ಆ ಪ್ರಮಾಣದಲ್ಲಿ ಕಡಿಮೆಯಾಗಲಿಲ್ಲ. ಇದಕ್ಕೆ ಒಂದು ಕಾರಣವೆಂದರೆ ಪರಿಣಾಮಕಾರಿ ವಿತರಣಾ ವ್ಯವಸ್ಥೆಯ ಕೊರತೆ, ಈ ಪರಿಸ್ಥಿತಿಯನ್ನು ಬದಲಾಯಿಸಲು, 2014 ರ ನಂತರ ಹೊಸದಾಗಿ ಕೆಲಸ ಆರಂಭಿಸಲಾಯಿತು ಎಂದರು.
ಪಡಿತರ ಚೀಟಿಗಳನ್ನು ಆಧಾರ್ ಕಾರ್ಡ್ಗಳಿಗೆ ಲಿಂಕ್ ಮಾಡಲಾಗಿರುವುದರಿಂದ ತಂತ್ರಜ್ಞಾನದ ಬಳಕೆಯಿಂದ ನಕಲಿ ಫಲಾನುಭವಿಗಳನ್ನು ಗುರುತಿಸಿ ಅವರನ್ನು ಹೊರಹಾಕಲು ಸಹಾಯ ಮಾಡಿತು, ಗುಜರಾತ್ ಸರ್ಕಾರವು ವಲಸೆ ಕಾರ್ಮಿಕರನ್ನು ನೋಡಿಕೊಳ್ಳುತ್ತಿರುವ ಕ್ರಮಕ್ಕೆ ಪ್ರಧಾನಿ ಶ್ಲಾಘಿಸಿದರು, "ಒಂದು ದೇಶ ಒಂದು ಪಡಿತರ ಚೀಟಿ ಉಪಕ್ರಮ" ದ ಉದ್ದೇಶವನ್ನು ರಾಜ್ಯ ಸರ್ಕಾರ ಪೂರೈಸಿದೆ ಎಂದು ಹೇಳಿದರು.