ಬೆಂಗಳೂರು, ಆ. 03 (DaijiworldNews/SM): ರಾಜ್ಯ ಸರಕಾರದ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ನಡೆಯುತ್ತಿದ್ದು, ಹೈಕಮಾಂಡ್ ಅಂಗಳದಲ್ಲಿ ಚೆಂಡು ಇದೆ. ಸದ್ಯ ಹಲವರು ಸಚಿವಾಕಾಂಕ್ಷಿಗಳಿದ್ದಾರೆ. ಈ ಪೈಕಿ ಎಲ್ಲರಿಗೂ ಸಚಿವ ಸ್ಥಾನ ಸಿಗುವುದಿಲ್ಲ. ಸರಿ ಸುಮಾರು 25ರಿಂದ 30 ಮಂದಿ ನೂತನ ಸಂಪುಟ ಸೇರಲಿದ್ದಾರೆ ಎನ್ನುವ ಲೆಕ್ಕಾಚಾರವನ್ನು ಬಿಜೆಪಿ ಹೈಕಮಾಂಡ್ ಹಾಕಿಕೊಂಡಿದೆ.
ಅದರಂತೆ ಬಿಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ ಕೆಲವರು ಸಚಿವರಾಗಿ ಮುಂದುವರೆದರೆ, ಇನ್ನು ಕೆಲವರಿಗೆ ಕೊಕ್ ಸಿಗುವುದು ಖಂಡಿತ. ಈ ಬಗ್ಗೆ ದೆಹಲಿ ನಾಯಕರು ಈಗಾಗಲೇ ತೀರ್ಮಾನ ಮಾಡಿದ್ದಾರೆ. ಆದರೆ, ಅವರ ಹೆಸರುಗಳನ್ನು ಅಂತಿಮ ಗೊಳಿಸಿದ್ದರೂ ಕೂಡ ಪ್ರಕಟಿಸಿಲ್ಲ. ನಾಳೆ ಸಂಜೆ ಅವರ ಹೆಸರುಗಳು ಬಹಿರಂಗಗೊಳ್ಳುವ ಸಾಧ್ಯತೆ ಇದೆ.
ಇನ್ನು ದೆಹಲಿಗೆ ತೆರಳಿರುವ ಸಿಎಂ ಇಂದು ಮರಳಿ ಬೆಂಗಳೂರಿಗೆ ಬರಬೇಕಿತ್ತು. ಆದರೆ, ನಾಳೆ ಬೆಳಗ್ಗೆ ಸಿಎಂ ಬೆಂಗಳೂರಿಗೆ ಮರಳಲಿದ್ದಾರೆ. ಆ ಬಳಿಕ ನೂತನ ಸಚಿವರ ಹೆಸರುಗಳು ಬಹಿರಂಗಗೊಳ್ಳಲಿದೆ. ನಾಳೆ ಮಧ್ಯಾಹ್ನ 2:15 ಗಂಟೆಗೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಬಳಿಕ ಖಾತೆ ಹಂಚಿಕೆ ಕಾರ್ಯ ನಡೆಯಲಿದೆ.