ಬೆಂಗಳೂರು, ಆ 03 (DaijiworldNews/MS): ಆಫ್ರಿಕಾ ಪ್ರಜೆಗಳಿಂದ ಜೆ.ಸಿ.ನಗರ ಠಾಣೆಯಲ್ಲಿ ನಡೆದ ದಾಂಧಲೆ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಆಫ್ರಿಕನ್ ಖಂಡದ ಪ್ರಜೆಗಳನ್ನು ಬಂಧಿಸಿರುವ ಉತ್ತರ ವಿಭಾಗದ ಪೊಲೀಸರು ತಲೆಮರೆಸಿಕೊಂಡಿರುವ ವ್ಯಕ್ತಿಗಳಿಗಾಗಿ ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಆರೋಪಿಗಳ ಸೆರೆಗಾಗಿ ರಚಿಸಲಾಗಿರುವ ಮೂರು ವಿಶೇಷ ತಂಡಗಳು ಈಗಾಗಲೇ ಕಾರ್ಯಾಚರಣೆ ಆರಂಭಿಸಿವೆ.
ಸಿಸಿಟಿವಿ ಮತ್ತು ಪೊಲೀಸರ ಹ್ಯಾಂಡಿ ಕ್ಯಾಮ್ನಲ್ಲಿ ಶೂಟ್ ಆದ ದೃಶ್ಯಗಳನ್ನು ಆಧರಿಸಿ, ಆಫ್ರಿಕಾ ಖಂಡದ ಪ್ರಜೆಗಳು ಹೆಚ್ಚಾಗಿ ವಾಸಿಸುತ್ತಿರುವ ಕೊತ್ತನೂರು, ಹೆಣ್ಣೂರು, ಬಾಣಸವಾಡಿ, ಆರ್.ಟಿ ನಗರ, ರಾಮಮೂರ್ತಿನಗರ ಮತ್ತು ಟಿ.ಸಿ.ಪಾಳ್ಯದಲ್ಲಿ ಹುಡುಕಾಟ ನಡೆಯುತ್ತಿದೆ.
ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಬಳಿಕ ಹೃದಾಯಘಾತದಿಂದ ಸಾವನ್ನಪ್ಪಿದ್ದ ಕಾಂಗೋ ದೇಶದ ಡ್ರಗ್ ಪೆಡ್ಲರ್ ಜಾನ್ ಅಲಿಯಾಸ್ ಜೋಯಲ್ ಶಿಂದನಿ ಮಾಲು (27) ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಹಸ್ತಾಂತರ ಮಾಡಲಾಗುತ್ತದೆ. ಕಾಂಗೋ ದೇಶಕ್ಕೆ ಮೃತದೇಹ ರವಾನೆ ಮಾಡಲು ತಿಳಿಸಿದರೆ ಕಳುಹಿಸಿಕೊಡಲು ಅದರ ಸಿದ್ಧತೆ ನಡೆಸಲಾಗುವುದು. ಸದ್ಯ ಕಾಂಗೋ ರಾಯಭಾರಿ ಕಚೇರಿಯ ಸಂದೇಶಕ್ಕಾಗಿ ಕಾಯಲಾಗುತ್ತಿದೆ.
ಪ್ರತಿಭಟನೆ ಮತ್ತು ಲಾಠಿ ಚಾರ್ಜ್ ನಡೆದ ನಂತರ ಪ್ರತಿಭಟನಾಕಾರರ ವಿರುದ್ಧ ಎರಡು ಪ್ರಕರಣಗಳು ಜೆ.ಸಿ.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ . ಪ್ರತಿಭಟನೆ ಸಂದರ್ಭದಲ್ಲಿ ಪ್ರತಿಭಟನಾಕಾರರು ಅಸಭ್ಯವಾಗಿ ವರ್ತಿಸಿದ್ದುದೇ ಅಲ್ಲದೆ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು.