ಬೆಂಗಳೂರು, ಆ 03 (DaijiworldNews/MS): ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯಾಲಯ(ಪಿಎಂಒ)ದಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಅಧಿಕಾರಿಯಾದ ಅಮರ್ ಜಿತ್ ಸಿನ್ಹಾ ರಾಜೀನಾಮೆ ನೀಡಿರುವ ವಿಚಾರವಾಗಿ ಕಾಂಗ್ರೆಸ್ ಲೇವಡಿ ಮಾಡಿದ್ದು "ರಾಡರ್ ತಜ್ಞ ಪ್ರಧಾನಿ ನರೇಂದ್ರ ಮೋದಿ ದೇಶ ಮುಳುಗಿಸುತ್ತಿರುವಾಗ ಬಚಾವಾಗಲು ಒಬ್ಬೊರಾಗಿಯೇ ದೋಣಿಯಿಂದ ಹೊರಗೆ ಜಿಗಿಯುತ್ತಿರುವಂತಿದೆ!" ಎಂದು ಹೇಳಿದೆ.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, " ಹಲವು ಪ್ರಧಾನಿ ಸಲಹೆಗಾರರು ರಾಜೀನಾಮೆ ನೀಡಿ ಹೋಗುತ್ತಿದ್ದಾರೆ, ಅಮರಜಿತ್ ಸಿನ್ಹಾ ಅವರು ಕಾರಣ ನೀಡದೆಯೇ ರಾಜೀನಾಮೆ ಕೊಡುವ ಮೂಲಕ ಕೇವಲ 6 ಅವಧಿಯೊಳಗೆ ಇಬ್ಬರು ಸಲಹೆಗಾರರು ರಾಜೀನಾಮೆ ಕೊಟ್ಟಂತಾಗಿದೆ. ರಾಡರ್ ತಜ್ಞ ನರೇಂದ್ರ ಮೋದಿ ಅವರು ದೇಶ ಮುಳುಗಿಸುತ್ತಿರುವಾಗ ಬಚಾವಾಗಲು ಒಬ್ಬೊರಾಗಿಯೇ ದೋಣಿಯಿಂದ ಹೊರಗೆ ಜಿಗಿಯುತ್ತಿರುವಂತಿದೆ ಎಂದು ವ್ಯಂಗ್ಯವಾಡಿದೆ.
ಬಿಹಾರ ಕೇಡರ್ ನ ಅಮರ್ ಜಿತ್ ಸಿನ್ಹಾ 1983ರ ತಂಡದ ಐಎಎಸ್ ಅಧಿಕಾರಿಯಾಗಿದ್ದಾರೆ. ಇವರು ನಿವೃತ್ತಿಗೊಂಡ ನಂತರ 2020ರ ಫೆಬ್ರವರಿಯಲ್ಲಿ ಎರಡು ವರ್ಷಗಳ ಕಾಲ ಪ್ರಧಾನಿ ಕಾರ್ಯಾಲಯದ ಸಲಹೆಗಾರರಾಗಿ ನೇಮಕಗೊಂಡಿದ್ದರು. ಆದರೆ, ಇನ್ನೂ ಏಳು ತಿಂಗಳು ಅಧಿಕಾರವಧಿ ಇರುವಾಗಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದು ಅಚ್ಚರಿ ತಂದಿದೆ.