ನವದೆಹಲಿ, ಆ.03 (DaijiworldNews/HR): ಸಂಸತ್ತು ಅಧಿವೇಶನದಲ್ಲಿ ಕಾಗದ ಪತ್ರಗಳನ್ನು ಹರಿದು ಹಾಕಿ, ಮಸೂದೆಗಳು ಅಂಗೀಕಾರ ಆಗುತ್ತಿರುವ ವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿರೋಧ ಪಕ್ಷಗಳ ವರ್ತನೆಗೆ ಪ್ರಧಾನಿ ನರೇಂದ್ರ ಮೋದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿದ ಭಾಷಣ ಕುರಿತು ಇಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ. "ಪೆಗಾಸಸ್ ಕುರಿತ ಐಟಿ ಸಚಿವ ಅಶ್ವಿನಿ ವೈಷ್ಣವ ಅವರ ಹೇಳಿಕೆಯನ್ನು ಟಿಎಂಸಿ ಸದಸ್ಯರು ರಾಜ್ಯಸಭೆಯಲ್ಲಿ ಹರಿದುಹಾಕಿದ್ದು, ಲೋಕಸಭೆಯಲ್ಲಿ ಕೂಡ ಹಲವು ಸದಸ್ಯರು ಕಾಗದ ಪತ್ರಗಳನ್ನು ಹರಿದ ಘಟನೆಗಳು ಮುಂಗಾರು ಅಧಿವೇಶನದ ವೇಳೆ ನಡೆದಿದ್ದು, ಅಂಗೀಕಾರದ ವಿಧಾನವನ್ನು ಟೀಕಿಸಿದ್ದ ಟಿಎಂಸಿ ನಾಯಕ ಡೆರಿಕ್ ಒಬ್ರೈನ್ ಅವರ ಟ್ವೀಟ್ ಕೂಡ ಮೋದಿಯವರನ್ನು ಕೆರಳಿಸಿದೆ" ಎಂದರು.
ಇನ್ನು ಮೊದಲ 10 ದಿನಗಳಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು 12 ಮಸೂದೆಗಳನ್ನು ಸರಾಸರಿ ಏಳು ನಿಮಿಷಗಳಲ್ಲಿ ಅಂಗೀಕರಿಸಿದ್ದು, ಇದೇನು ಶಾಸನಗಳ ಅಂಗೀಕಾರವೋ? 'ಪಾಪ್ರಿ ಚಾಟ್' ಮಾಡುವುದೋ? ಎಂದು ಪ್ರಶ್ನಿಸಿ ಡೆರಿಕ್ ಒಬ್ರೈನ್ ಟ್ವೀಟ್ ಮಾಡಿದ್ದರು.
ಪ್ರತಿಪಕ್ಷಗಳ ನಡವಳಿಕೆಯು ಸಂಸತ್ತು ಮತ್ತು ಸಂವಿಧಾನಕ್ಕೆ ಮಾಡಿದ "ಅವಮಾನ" ಎಂದು ಮೋದಿ ಅವರು ಹೇಳಿರುವುದಾಗಿ ಜೋಶಿ ತಿಳಿಸಿದ್ದಾರೆ.
ಇನ್ನು ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಜನರಿಗೆ ದ್ರೋಹ ಬಗೆಯುತ್ತಿರುವ ವಿಪಕ್ಷ ಸಂಸದರು, ಅಧಿವೇಶನದ ಉಳಿದ ಸಮಯವನ್ನಾದರೂ ಸದುಪಯೋಗಪಡಿಸಿಕೊಳ್ಳುವತ್ತ ಗಮನಹರಿಸಲಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿರುವುದಾಗಿ ತಿಳಿಸಿದ್ದಾರೆ.