ನವದೆಹಲಿ, ಆ 02 (DaijiworldNews/PY): ರಾಷ್ಟ್ರೀಯ ಜೂನಿಯರ್ ಕುಸ್ತಿ ಮಾಜಿ ಚಾಂಪಿಯನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿ ಪಟು ಸುಶೀಲ್ ಕುಮಾರ್ ಮತ್ತು 19 ಇತರ ಮಂದಿ ವಿರುದ್ಧ ಸೋಮವಾರ ದೆಹಲಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಸುಶೀಲ್ ಕುಮಾರ್ ಅವರನ್ನು ಮುಖ್ಯ ಆರೋಪಿಯನ್ನಾಗಿ ಹೆಸರಿಸಿದ ಅಂತಿಮ ವರದಿಯನ್ನು ಪೊಲೀಸರು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸತ್ವೀರ್ ಸಿಂಗ್ ಲಂಬಾ ಅವರಿಗೆ ಸಲ್ಲಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ 5 ಮಂದಿ ತಲೆಮರೆಸಿಕೊಂಡಿದ್ದಾರೆ.
ಮೇ 4 ಮತ್ತು 5 ರ ಮಧ್ಯರಾತ್ರಿಯಲ್ಲಿ ಕ್ರೀಡಾಂಗಣದಲ್ಲಿ ಸಾಗರ್ ಧಂಕರ್ ಮತ್ತು ಅವರ ಇಬ್ಬರು ಸ್ನೇಹಿತರ ಮೇಲೆ ಸುಶೀಲ್ ಕುಮಾರ್ ಮತ್ತು ಆತನ ಸಹಚರರು ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡಿದ್ದ ಧನ್ಕರ್ ಸಾವನ್ನಪ್ಪಿದ್ದರು.
ಕೊಲೆಯ ಮುಖ್ಯ ಅಪರಾಧಿ ಮತ್ತು ಮಾಸ್ಟರ್ ಮೈಂಡ್ ಸುಶೀಲ್ ಕುಮಾರ್ ಎಂದು ಪೊಲೀಸರು ಆರೋಪಿಸಿದ್ದಾರೆ ಮತ್ತು ಅದಕ್ಕೆ ಸೂಕ್ತ ಎಲೆಕ್ಟ್ರಾನಿಕ್ ಪುರಾವೆಗಳಿವೆ, ಅದರಲ್ಲಿ ಅವರು ಮತ್ತು ಅವರ ಸಹಚರರು ಧಂಕರ್ ಅವರನ್ನು ಹೊಡೆಯುವುದನ್ನು ಕಾಣಬಹುದಾಗಿದ್ದು, ಸಹ ಆರೋಪಿ ಅಜಯ್ ಕುಮಾರ್ ಸೆಹ್ರಾವತ್ ಅವರೊಂದಿಗೆ ಸುಶೀಲ್ ಕುಮಾರ್ ಅವರನ್ನು ಮೇ 23 ರಂದು ಬಂಧಿಸಲಾಗಿತ್ತು.