ಬೆಂಗಳೂರು,ಅ 01 (DaijiworldNews/MS): ಬಿಜೆಪಿ ಹೈಕಮಾಂಡ್ನ ಹುಚ್ಚಾಟ ಅತಿರೇಕಕ್ಕೆ ಹೋಗಿದ್ದು ರಾಜ್ಯ ಸರ್ಕಾರ ಇದ್ದೂ ಸತ್ತಂತೆ ಆಗಿದೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡುರಾವ್ ಟೀಕೆ ಮಾಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಮಂಡಲ ರಚನೆ ಗಜಪ್ರಸವದಂತಾಗಿದೆ. 2019 ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ರಚನೆಯಾದಾಗಲೂ 2 ತಿಂಗಳ ಬಳಿಕ ಸಂಪುಟ ರಚನೆಯಾಗಿತ್ತು.
ಈಗ ಬಿ.ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲೂ ಸಂಪುಟ ರಚನೆಯ ಗೊಂದಲ ಇನ್ನೂ ಮುಂದುವರೆದಿದೆ. ಬಿಜೆಪಿ ಹೈಕಮಾಂಡ್ಗೆ ಸಿಎಂ ಬದಲಾಯಿಸುವಾಗ ಇದ್ದ ತರಾತುರಿ ಸಂಪುಟ ರಚನೆಯಲ್ಲೂ ಇರಬೇಕಲ್ಲವೆ?
ಬಿಜೆಪಿಗೆ ರಾಜ್ಯದಲ್ಲಿ ಏಕವ್ಯಕ್ತಿ ಸರ್ಕಾರ ನಡೆಸುವ ಇರಾದೆಯಿದ್ದರೆ ಅದನ್ನು ಸ್ಪಷ್ಟಪಡಿಸಲಿ.ಬಿಜೆಪಿ ಹೈಕಮಾಂಡ್ನ ಹುಚ್ಚಾಟ ಅತಿರೇಕಕ್ಕೆ ಹೋಗಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕೊರೊನಾ 3ನೇ ಅಲೆಯ ಆತಂಕ,ಮತ್ತು ನೆರೆ ಪರಿಸ್ಥಿತಿಯಿದೆ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಆದವರು, ಕೆಲಸ ಕಾರ್ಯ ಬಿಟ್ಟು ಪದೇ ಪದೇ ದೆಹಲಿಗೆ ಹೋಗುವುದು ಎಷ್ಟು ಸರಿ? ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಗಿರಿಗಾಗಿ ಲಾಬಿ ಮಾಡುತ್ತಿರುವ ಬಿಜೆಪಿ ಶಾಸಕರು, ತಮ್ಮ ಕ್ಷೇತ್ರದ ಕಡೆ ತಲೆ ಹಾಕಿ ಮಲಗಿಲ್ಲ. ಮಂತ್ರಿ ಪದವಿ ಪಡೆಯಲು ಶಾಸಕರು ದೆಹಲಿಯಲ್ಲಿ ತಳವೂರಿದ್ದರೆ,ಇನ್ನು ಕೆಲವರು ಬೆಂಗಳೂರಲ್ಲಿ ಗಿರಕಿ ಹೊಡೆಯುತ್ತಿದ್ದಾರೆ. ಈ ಶಾಸಕರಿಗೆ ತಾವು ಪ್ರತಿನಿಧಿಸುವ ಕ್ಷೇತ್ರದ ಸಮಸ್ಯೆಗಿಂತ, ಮಂತ್ರಿ ಪದವಿಯೇ ಮುಖ್ಯವಾಗಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಹೈಕಮಾಂಡ್ಗೆ ರಾಜ್ಯದ ಜನರ ಬಗ್ಗೆ ಕೊಂಚವಾದರೂ ಕನಿಕರವಿದ್ದರೆ,ಈ ಸಂಪುಟ ರಚನೆ ಎಂಬ ಸರ್ಕಸ್ನ್ನು ಬೇಗ ಮುಗಿಸಲಿ. ಸಂಪುಟ ರಚನೆ ಎಂಬುದು ಕಮಲ ಪಕ್ಷದ ಹೈಕಮಾಂಡ್ ಪಾಲಿಗೆ ಚೆಲ್ಲಾಟವಾಗಿರಬಹುದು.
ಆದರೆ ರಾಜ್ಯದ ಜನರ ಪಾಲಿಗೆ ಇದು ಪ್ರಾಣ ಸಂಕಟವಾಗಿದೆ.ರಾಜ್ಯದ ಜನರಿಗೆ ಈ ನೂತನ ಸರ್ಕಾರ ಇದ್ದೂ ಸತ್ತಂತೆ ಭಾಸವಾಗುತ್ತಿದೆ ಎಂದು ಹೇಳಿದ್ದಾರೆ.