ನವದೆಹಲಿ, ಆ 02 (DaijiworldNews/PY): "ಭಾರತದ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಪ್ರಾರಂಭವಾಗುತ್ತಿದ್ದಂತೆ ಹಲವು ಮಹತ್ವದ ಬೆಳವಣಿಗೆಗಳು ನಡೆದಿದ್ದು, ಭಾರತೀಯರಿಗೆ ಈ ವಿಚಾರ ಸಂತೋಷ ತಂದಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ದೇಶವು ಅಮೃತ ಮಹೋತ್ಸವಕ್ಕೆ ಪ್ರವೇಶಿಸುತ್ತಿದ್ದಂತೆ ಹಲವಾರು ಮಹತ್ವದ ಘಟನೆಗಳು ನಡೆದಿವೆ. ದಾಖಲೆ ಪ್ರಮಾಣದಲ್ಲಿ ಲಸಿಕೆ ವಿತರಣೆ, ಜಿಎಸ್ಟಿ ಸಂಗ್ರಹ ಹೆಚ್ಚಳ ಸೇರಿದಂತೆ ಇತರೆ ಬೆಳವಣಿಗೆಗಳು ಭಾರತೀಯರಿಗೆ ಸಂತಸವನ್ನುಂಟು ಮಾಡಿದೆ. ಇದು ದೇಶದ ಆರ್ಥಿಕತೆ ಸುಧಾರಿಸುತ್ತಿದೆ ಎನ್ನುವುದನ್ನು ಸೂಚಿಸುತ್ತದೆ" ಎಂದಿದ್ದಾರೆ.
"ಒಲಿಂಪಿಕ್ಸ್ನಲ್ಲಿ ಪಿ.ವಿ ಸಿಂಧು ಅವರು ಪದಕ ಗಳಿಸಿದ್ದು ಮಾತ್ರವಲ್ಲದೇ, ಭಾರತೀಯ ಮಹಿಳಾ ಹಾಗೂ ಪುರುಷರ ಹಾಕಿ ತಂಡ ಉತ್ತಮವಾದ ಪ್ರದರ್ಶನ ನೀಡುತ್ತಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ದೇಶದ 130 ಕೋಟಿ ಜನರು ಅಮೃತಮಹೋತ್ಸವದ ಈ ವೇಳೆಯಲ್ಲಿ ಭಾರತದ ಏಳಿಗೆಗಾಗಿ ಮತ್ತಷ್ಟು ಶ್ರಮಿಸಲಿದ್ದಾರೆ ಎನ್ನುವ ನಿರೀಕ್ಷೆ ಇದೆ" ಎಂದಿದ್ದಾರೆ.