ಮುಂಬೈ, ಆ 02 (DaijiworldNews/PY): ಅಶ್ಲೀಲ ಸಿನಿಮಾ ಮಾಡಲು ಹೋಗಿ ಬಂಧಿತರಾಗಿರುವ ಉದ್ಯಮಿ ರಾಜ್ ಕುಂದ್ರಾ ಈಗ ನ್ಯಾಯಾಂಗ ಬಂಧನದಲ್ಲಿದ್ದು, ಈ ಬಗ್ಗೆ ಅವರ ಪತ್ನಿ ನಟಿ ಶಿಲ್ಪಾ ಶೆಟ್ಟಿ ಅವರು ಕೊನೆಗೂ ಮೌನ ಮುರಿದಿದ್ದಾರೆ.
"ಇತ್ತೀಚಿನ ದಿನಗಳಲ್ಲಿ ನನಗೆ ಸವಾಲುಗಳು ಎದುರಾಗಿದ್ದು, ಸಾಕಷ್ಟು ವದಂತಿಗಳು ಹಾಗೂ ಆರೋಪಗಳು ಬಂದಿವೆ. ಮಾಧ್ಯಮಗಳು ಹಾಗೂ ಕೆಲ ಹಿತೈಷಿಗಳು ಅನಗತ್ಯವಾದ ಮಾತುಗಳನ್ನಾಡಿದ್ದಾರೆ. ಅಲ್ಲದೇ, ನನ್ನ ಕುಟುಂಬದ ಬಗ್ಗೆ ಸಾಕಷ್ಟು ಟೀಕೆ ಹಾಗೂ ಪ್ರಶ್ನೆ ಮಾಡಿದ್ದಾರೆ. ನಾನಿನ್ನೂ ನನ್ನ ನಿಲುವನ್ನು ತಿಳಿಸಿಲ್ಲ. ಹಾಗಾಗಿ ದಯವಿಟ್ಟು ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುವುದನ್ನು ನಿಲ್ಲಿಸಿ" ಎಂದು ಮನವಿ ಮಾಡಿದ್ದಾರೆ.
"ಓರ್ವ ಸೆಲೆಬ್ರಿಟಿಯಾಗಿ ಎಂದಿಗೂ ದೂರಬೇಡಿ, ಎಂದಿಗೂ ವಿವರಿಸಬೇಡಿ ಎನ್ನುವ ನನ್ನ ಫಿಲಾಸಫಿಯನ್ನು ಪುನರುಚ್ಚರಿಸುತ್ತೇನೆ. ಮುಂಬೈ ಪೊಲೀಸರು ಹಾಗೂ ಭಾರತದ ಕಾನೂನಿನ ಮೇಲೆ ನನಗೆ ಪೂರ್ಣ ನಂಬಿಕೆ ಇದೆ. ಒಂದು ಕುಟುಂಬವಾಗಿ, ನಾವು ಲಭ್ಯವಿರುವ ಎಲ್ಲಾ ಕಾನೂನು ಪರಿಹಾರಗಳ ಮೇಲೆ ನಂಬಿಕೆ ಇಟ್ಟಿದ್ದೇವೆ. ಆದರೆ, ಅಲ್ಲಿಯವರೆಗೆ ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ. ಓರ್ವ ತಾಯಿಯಾಗಿ ಕೇಳಿಕೊಳ್ಳುತ್ತಿದ್ದೇನೆ. ನನ್ನ ಮಕ್ಕಳ ಸಲುವಾಗಿ ನಮ್ಮ ಖಾಸಗಿತನಕ್ಕೆ ಗೌರವ ನೀಡಿ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಸುಳ್ಳು ಮಾಹಿತಿಗಳಿಗೆ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಿ" ಎಂದು ಮನವಿ ಮಾಡಿಕೊಂಡಿದ್ದಾರೆ.
"ನಾನು ಕಾನೂನು ಪಾಲಿಸುವ ಭಾರತೀಯ ಪ್ರಜೆ. ಕಳೆದ 29 ವರ್ಷಗಳಿಂದ ಕಠಿಣ ಪರಿಶ್ರಮಹೊಂದಿರುವ ವೃತ್ತಪರ ವ್ಯಕ್ತಿ. ನನ್ನ ಮೇಲೆ ಜನರು ನಂಬಿಕೆ ಇಟ್ಟಿದ್ದಾರೆ. ನಾನು ಯಾರನ್ನೂ ನಿರಾಸೆಗೊಳಿಸಿಲ್ಲ. ನಾವು ಮಾಧ್ಯಮ ವಿಚಾರಣೆಗೆ ಅರ್ಹರಲ್ಲ. ದಯವಿಟ್ಟು ಕಾನೂನಿಗೆ ತನ್ನ ಕಾರ್ಯವನ್ನು ಮಾಡಲು ಅವಕಾಶ ಕೊಡಿ" ಎಂದು ಬರೆದುಕೊಂಡಿದ್ದಾರೆ.
ಜುಲೈ 19ರಂದು ಪೋರ್ನ್ ವಿಡಿಯೋ ನಿರ್ಮಾಣ ಹಾಗೂ ಅವುಗಳನ್ನು ಮೊಬೈಲ್ ಆಪ್ಗಳ ಮೂಲಕ ವಿತರಣೆಯ ಆರೋಪದಡಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.