ನವದೆಹಲಿ, ಅ 01 (DaijiworldNews/MS): ಕಣ್ಣೀರಿನಲ್ಲೂ ಕೊರೊನಾ ವೈರಸ್ ಅಡಗಿಕೊಂಡಿದೆಯೇ ? ಹೌದು ಇದನ್ನು ಸಂಪೂರ್ಣವಾಗಿ ಅಲ್ಲಗಳೆಯುವಂತಿಲ್ಲ ಯಾಕೆಂದರೆ ಕಣ್ಣೀರು ಕೂಡಾ ಕೋವಿಡ್ -19 ಸೋಂಕು ಹರಡುವ ಸಂಭಾವ್ಯ ಮೂಲವಾಗಬಹುದು ಎಂದು ಅಮೃತಸರದ ಸರ್ಕಾರಿ ವೈದ್ಯಕೀಯ ಕಾಲೇಜಿನ ಅಧ್ಯಯನವೊಂದು ಹೇಳಿದೆ.
ಕೋವಿಡ್ ಸೋಂಕಿತರ ಕಣ್ಣೀರಿನ ಮೂಲಕವೂ ಇನ್ನೊಬ್ಬರಿಗೆ ಸೋಂಕು ತಗುಲಬಹುದು ಎಂದು ಸಂಶೋಧಕರು ನಿರ್ದಿಷ್ಟವಾಗಿ ಆರಿಸಿದ 120 ಕೋವಿಡ್ ರೋಗಿಗಳ ಮೇಲೆ ಅಧ್ಯಯನ ನಡೆಸಿ ಈ ಅಂಶವನ್ನು ಕಂಡುಹಿಡಿದಿದ್ದಾರೆ. ಸೋಂಕಿನ ಪ್ರಾಥಮಿಕ ಪ್ರಸರಣವು ಉಸಿರಾಟದ ಹನಿಗಳಿಂದ ಆಗಿದ್ದರೂ, ಬೇರೆ ರೀತಿಯಲ್ಲಿಯೂ ಕೊವೀಡ್ ಹರಡುವ ಸಂಭವವನ್ನು ತಳ್ಳಿಹಾಕುವಂತಿಲ್ಲ ಎಂದು ಅಧ್ಯಯನ ತಿಳಿಸಿದೆ.
ಅಧ್ಯಯನಕ್ಕೆ ಆರಿಸಲಾದ 120 ಕೋವಿಡ್ ರೋಗಿಗಳ ಪೈಕಿ 60 ಮಂದಿಗೆ ನೇತ್ರ ಸಂಬಂಧಿ ತೊಂದರೆ ಇತ್ತು. ಇನ್ನುಳಿದ 60 ಮಂದಿಗೆ ಇಂಥ ಲಕ್ಷಣಗಳು ಇರಲಿಲ್ಲ. ಇವರ ಪೈಕಿ 41 ರೋಗಿಗಳಿಗೆ ಕಾಂಜಂಕ್ಟಿವಲ್ ಹೈಪರೆಮಿಯಾ, 38 ಮಂದಿಗೆ ಫಾಲಿಕುಲಾರ್ ರಿಯಾಕ್ಷನ್, 35 ಮಂದಿಗೆ ಕೆಮೋಸಿಸ್, 20 ಮಂದಿಗೆ ಕಣ್ಣಿನ ತಿರುಳೆಗೆ ಸಂಬಂಧಿಸಿದಂತೆ ಹಾಗೂ 11 ಮಂದಿಗೆ ಕಣ್ಣಿನಲ್ಲಿ ಕಡಿತ ಕಾಣಿಸಿತ್ತು. ಇನ್ನು, ಕಣ್ಣಿನ ತೊಂದರೆಯ ಲಕ್ಷಣಗಳಿದ್ದ 60 ಮಂದಿಯ ಪೈಕಿ ಶೇ. 37 ಮಂದಿಗೆ ಸಾಧಾರಣ ಕೋವಿಡ್ ಸೋಂಕು ಇದ್ದರೆ ಇನ್ನುಳಿದವರಿಗೆ ಕೋವಿಡ್ ಸೋಂಕಿನ ತೀವ್ರತೆ ಹೆಚ್ಚು ಇತ್ತು. ಇನ್ನು, ಕಣ್ಣಿನ ಸಮಸ್ಯೆಯ ಲಕ್ಷಣಗಳಿಲ್ಲದ ಇತರ 60 ಮಂದಿಯ ಪೈಕಿ ಶೇ. 52 ಮಂದಿಗೆ ಕೋವಿಡ್ ಸೋಂಕು ಸಾಧಾರಣ ಇದ್ದರೆ ಇನ್ನುಳಿದವರ ಸೋಂಕಿನ ತೀವ್ರತೆ ತುಂಬಾ ಅಧಿಕ ಇತ್ತು ಎಂದು ಈ ಅಧ್ಯಯನದಲ್ಲಿ ತಿಳಿಸಲಾಗಿದೆ
ಕೋವಿಡ್ನ ರೋಗನಿರ್ಣಯಕ್ಕೆ ಉತ್ತಮ ಮಾನದಂಡವೆಂದು ಪರಿಗಣಿಸುವ ಸಾಂಪ್ರದಾಯಿಕ ರಿವರ್ಸ್ ಟ್ರಾನ್ಸ್ಕ್ರಿಪ್ಶನ್-ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್ಟಿ-ಪಿಸಿಆರ್) ಪರೀಕ್ಷಾ ವಿಧಾನದಿಂದ ಕೋವಿಡ್ ಇರುವಿಕೆಯನ್ನು ಮೌಲ್ಯಮಾಪನ ಮಾಡಲು ರೋಗಿಗಳ ಎರಡೂ ಕಣ್ಣುಗಳಿಂದ 48 ಗಂಟೆಗಳಲ್ಲಿ ಒಳಗಾಗಿ ಕಣ್ಣೀರಿನ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ.
ಕಣ್ಣೀರಿನ ಸ್ಯಾಂಪಲ್ ಮೂಲಕ ನಡೆಸಲಾದ ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ಶೇ. 17.5 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಈ ರೀತಿ ಪಾಸಿಟಿವ್ ಬಂದಿರುವವರಲ್ಲಿ ಶೇ. 9.16 ಮಂದಿಗೆ ಕಣ್ಣು ಸಂಬಂಧಿತ ತೊಂದರೆಗಳ ಲಕ್ಷಣಗಳಿವೆ. ಶೇ. 8.33 ಮಂದಿಗೆ ಇಂಥ ಯಾವುದೇ ಲಕ್ಷಣಗಳು ಕಾಣಿಸಿಲ್ಲ. ಹೀಗಾಗಿ, ಕಣ್ಣಿನ ತೊಂದರೆಗಳು ಇಲ್ಲದಿದ್ದರೂ ಕೋವಿಡ್ ರೋಗಿಗಳ ಕಣ್ಣೀರಿನಿಂದ ಸೋಂಕು ಹರಡುವ ಸಾಧ್ಯತೆ ಇದೆ ಎಂಬುದು ಈ ಸಂಶೋಧನೆಯಿಂದ ತಿಳಿದುಬರುತ್ತದೆ ಎಂಬುದು ಅಮೃತಸರದ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಕಟಿಸಿದ ವರದಿಯಲ್ಲಿ ತಿಳಿಸಲಾಗಿದೆ.