ಶಿವಮೊಗ್ಗ, ಆ 02 (DaijiworldNews/PY): "ಪಕ್ಷ ಸಂಘಟನೆಗೆ ಅಧಿಕಾರ ಬೇಕಾಗಿಲ್ಲ. ಅಧಿಕಾರ ಇಲ್ಲದಿದ್ದರೂ ಪಕ್ಷ ನಮ್ಮ ಅನುಭವ ಬಳಕೆ ಮಾಡಿಕೊಳ್ಳಬಹುದು" ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಚಿವ ಸಂಪುಟ ಇನ್ನೊಂದೆರಡು ದಿನಗಳಲ್ಲಿ ವಿಸ್ತರಣೆ ಆಗಲಿದೆ. ಸಂಪುಟದಲ್ಲಿ ಯಾರು ಸೇರುತ್ತಾರೋ ಯಾರು ಬಿಡುತ್ತಾರೋ ಎನ್ನುವುದು ನನಗೂ ತಿಳಿದಿಲ್ಲ. ಎಲ್ಲಾ ಭಗವಂತನಿಗೆ ಹಾಗೂ ಹೈಕಮಾಂಡ್ಗೆ ಬಿಟ್ಟಿದ್ದು" ಎಂದಿದ್ದಾರೆ.
"ಯುವಕರಿಗೆ ಆದ್ಯತೆ ಹಾಗೂ ಹಳಬರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಹೈಕಮಾಂಡ್ ಲಾಬಿ ಹಾಗೂ ಒತ್ತಡಕ್ಕೆ ಎಲ್ಲಾ ಮಣಿಯುತ್ತದೆ ಎಂದು ನನಗನಿಸುವುದಿಲ್ಲ. ಹಾಗಾಗಿ ಪಕ್ಷಕ್ಕೆ ವಲಸೆ ಬಂದವರ ಪೈಕಿ ಅವಕಾಶ ಸಿಗದೇ ಇರಬಹುದು. ಪಕ್ಷ ಕೃಷ್ಣ ತಂತ್ರಗಾರಿಕೆಯನ್ನು ಅನುಸರಿಸಬಹುದು" ಎಂದು ಹೇಳಿದ್ದಾರೆ.
ಸಿಎಂ ಬೊಮ್ಮಾಯಿ ಸರ್ಕಾರದ ಭವಿಷ್ಯ ಮುಂದಿನ ಆರು ತಿಂಗಳು ಎನ್ನುವ ಸ್ವಾಮೀಜಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ವಿಚಾರವಾಗಿ ನಾನು ಏನೂ ಮಾತನಾಡುವುದಿಲ್ಲ. ಇದು ಸತ್ಯ ಆಗಬಹುದು ಅಥವಾ ಸುಳ್ಳು ಆಗಲೂಬಹುದು" ಎಂದು ತಿಳಿಸಿದ್ದಾರೆ.