ಚಿಕ್ಕಮಗಳೂರು, ಆ 02 (DaijiworldNews/PY): "ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ. ಪಕ್ಷವು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ನೀಡಿದ್ದು, ಆ ಹುದ್ದೆಯನ್ನು ನಾನು ನಿರ್ವಹಿಸುತ್ತಿದ್ದೇನೆ" ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ತಾಲ್ಲೂಕಿನ ಹಿರೇಕೊಳಲೆ ಕೆರೆಗೆ ಬಾಗಿನ ಅರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜನರ ಹಿತದೃಷ್ಟಿ ಇಟ್ಟುಕೊಂಡು ಸಂಪುಟ ವಿಸ್ತರಣೆ ಮಾಡಬೇಕು. ಸಿಎಂ ಬಸವರಾಜ ಬೊಮ್ಮಾಯಿ ಅವರು ಅನುಭವಿಯಾಗಿದ್ದು, ಆಡಳಿತ ದೃಷ್ಟಿ ಹಾಗೂ ರಾಜಕೀಯ ಸಮತೋಲನ ಇಟ್ಟುಕೊಂಡು ನಿರ್ವಹಿಸುತ್ತಾರೆ ಎನ್ನುವ ಭರವಸೆ ಇದೆ" ಎಂದಿದ್ದಾರೆ.
"ಚಿಕ್ಕಮಗಳೂರು ಜಿಲ್ಲೆಗೆ ಒಂದು ಸಚಿವ ಸ್ಥಾನ ನೀಡಬೇಕು ಎನ್ನುವುದು ಕಾರ್ಯಕರ್ತರ ಹಾಗೂ ಜನರ ಅಪೇಕ್ಷೆ. ಸಿಎಂ ಬಸವರಜ ಬೊಮ್ಮಾಯಿ ಅವರೊಂದಿಗೆ ಈ ಬಗ್ಗೆ ತಿಳಿಸಿದ್ದೇನೆ" ಎಂದು ಹೇಳಿದ್ದಾರೆ.
"ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರಕ್ಕೆ ಸಂಕಷ್ಟ ಬಂದಲ್ಲಿ ಬೆಂಬಲ ನೀಡುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಭರವಸೆ ನೀಡಿದ್ದನ್ನು ಸ್ವಾಗತಿಸುತ್ತೇನೆ. ದೇಶದ ಹಿತಕ್ಕೆ ಆದ್ಯತೆ ನೀಡುವ ರಾಜಕಾರಣವೇ ಮೊದಲಾಗಬೇಕು" ಎಂದಿದ್ದಾರೆ.