ಬೆಂಗಳೂರು, ಆ 02 (DaijiworldNews/PY): ರಾಜ್ಯಾದ್ಯಂತ ಇನ್ನು ಕೆಲವೇ ದಿನಗಳಲ್ಲಿ ಸಾಲು ಸಾಲು ಹಬ್ಬಗಳು ಪ್ರಾರಂಭವಾಗಲಿವೆ. ಈ ನಡುವೆ ಕೊರೊನಾ ಮೂರನೇ ಅಲೆಯ ಆತಂಕ ಶುರುವಾಗಿದ್ದು, ಈ ಬಾರಿಯೂ ಹಬ್ಬ ಹಾಗೂ ಉತ್ಸವಗಳನ್ನು ಸರಳವಾಗಿ ಆಚರಿಸಲು ಸರ್ಕಾರ ಚಿಂತನೆ ನಡೆಸಿದೆ.
ಸಾಂದರ್ಭಿಕ ಚಿತ್ರ
"ಹಬ್ಬದ ಸಂಭ್ರವನ್ನಾಚರಿಸಲು ಹೆಚ್ಚು ಜನರು ಸೇರುವಂತೆ ಮಾಡಿದ್ದಲ್ಲಿ, ಈ ಹಬ್ಬಗಳೇ ಸೂಪರ್ ಸ್ಪ್ರೆಡರ್ ಸಂದರ್ಭ ಆಗಬಹುದು" ಎಂದು ರಾಜ್ಯದ ಕೊರೊನಾ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಸಿಎನ್.ಮಂಜುನಾಥ್ ಎಚ್ಚರಿಸಿದ್ದಾರೆ.
"ದೇಗುಲಗಳಲ್ಲಿ ಹಾಗೂ ಇತರೆ ಪ್ರದೇಶಗಳಲ್ಲಿ ನಡೆಯುವ ಉತ್ಸವಗಳ ಮೇಲೆ ನಿರ್ಬಂಧ ಹೇರುವ ಅಗತ್ಯವಿದೆ. ಹಬ್ಬಗಳ ಸಂದರ್ಭ ಪರಿಸ್ಥಿತಿ ನಿಭಾಯಿಸುವುದು ಆಯಾ ಉಪ ಆಯುಕ್ತರ ಜವಾಬ್ದಾರಿಯಾಗಿದೆ. ಹಬ್ಬಗಳ ಸಂದರ್ಭದಲ್ಲಿ ಹೆಚ್ಚಾಗಿ ಜನ ಸೇರಲಿದ್ದು, ನಿಯಮ ಉಲ್ಲಂಘಿಸುತ್ತಾರೆ. ಮುಖ್ಯವಾಗಿ ಗ್ರಾಮಗಳ ಉತ್ಸವದ ವೇಳೆ 10-15 ಗ್ರಾಮಸ್ಥರು ಒಂದೆಡೆ ಸೇರುತ್ತಾರೆ. ಹಾಗಾಗಿ ಇಂತ ಉತ್ಸವಗಳಿಗೆ ಅವಕಾಶ ನೀಡಬಾರದು. ಅಲ್ಲದೇ, ರಾಜಕೀಯ ಪ್ರಚಾರ ಕಾರ್ಯಗಳಿಗೂ ಅವಕಾಶ ನೀಡದೇ ನಿರ್ಬಂಧ ಹೇರುವ ಅಗತ್ಯವಿದೆ" ಎಂದಿದ್ದಾರೆ.
"ಶೇ.2ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಕಠಿಣ ಕ್ರಮ ಕೈಗೊಳ್ಳವಂತೆ ಕೊರೊನಾ ತಾಂತ್ರಿಕಾ ಸಲಹಾ ಸಮಿತಿ ಶಿಫಾರಸು ಮಾಡಿದೆ. ಯಾವುದೇ ಹಬ್ಬ, ಜಾತ್ರೆ, ಉತ್ಸವ, ಪೂಜೆ ಹಾಗೂ ಸಾರ್ವಜನಿಕ ಸಭೆಗಳನ್ನು ನಡೆಸಲು ನಾವು ಶಿಫಾರಸು ಮಾಡಿಲ್ಲ. ಜನರು ತಮ್ಮ ತಮ್ಮ ಮನೆಯಲ್ಲಿ ಆಚರಿಸಲು ಅವಕಾಶವಿದೆ" ಎಂದು ತಿಳಿಸಿದ್ದಾರೆ.
"ರಾಜ್ಯದಲ್ಲಿ ಕೊರೊನಾ ಲಸಿಕೆ ನೀಡುವಿಕೆ ಉತ್ತಮವಾಗಿ ನಡೆಯುತ್ತಿದ್ದು, ಈ ಹಿನ್ನೆಲೆ ಕೊರೊನಾದ ಮೂರನೇ ಅಲೆ ಪರಿಣಾಮ ಬೀರುವುದಿಲ್ಲ ಎನ್ನುವ ಭರವಸೆ ಇದೆ. ಹಬ್ಬಗಳು ಸೇರಿದಂತೆ ಉತ್ಸವ ಹಾಘೂ ರ್ಯಾಲಿಗಳ ಮೇಲೆ ನಿಷೇಧ ಹೇರುವುದರೊಂದಿಗೆ ಕೊರೊನಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು" ಎಂದು ಹೇಳಿದ್ದಾರೆ.
ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ದ.ಕ ಜಿಲ್ಲೆಯಲ್ಲಿ ಆಗಸ್ಟ್ 10ರವರೆಗೆ ಸಾರ್ವಜನಿಕ ಸಭೆಗಳನ್ನು ನಿರ್ಬಂಧಿಸಲಾಗಿದೆ. ಅಲ್ಲದೇ, ಒಂದು ವಾರಗಳ ಕಾಲ ಅಂತರ್ ರಾಜ್ಯ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.