ಬೆಂಗಳೂರು, ಆ 02 (DaijiworldNews/PY): "ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಷ್ಟಕಾಲ ಬಂದಲ್ಲಿ ನಾನು ಬೆಂಬಲ ನೀಡುತ್ತೇನೆ" ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಬೊಮ್ಮಾಯಿ ಸರ್ಕಾರಕ್ಕೆ ಕಷ್ಟಕಾಲ ಬಂದಲ್ಲಿ ನಾನು ಬೆಂಲ ನೀಡುತ್ತೇನೆ. ನಮಗೆ ಅವಧಿಗೂ ಮುನ್ನ ಚುನಾವಣೆಗೆ ಹೋಗುವ ಆಸೆ ಇಲ್ಲ" ಎಂದಿದ್ದಾರೆ.
"ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ದೂರವಿಟ್ಟು ಏನೂ ಮಾಡಲು ಸಾಧ್ಯವಿಲ್ಲ. ಸಿಎಂ ಬೊಮ್ಮಾಯಿ ಅವರಿಗೆ ಯಡಿಯೂರಪ್ಪ ಅವರ ಬೆಂಬಲವೂ ಇದೆ. ಈ ಹಿನ್ನೆಲೆ ಸರ್ಕಾರಕ್ಕೆ ಯಾವುದೇ ರೀತಿಯಾದ ಸಮಸ್ಯೆ ಎದುರಾಗದು" ಎಂದು ತಿಳಿಸಿದ್ದಾರೆ.
"ನಾವೇನು ಯಡಿಯೂರಪ್ಪ ಅವರನ್ನು ತೆಗೆಯಬೇಕು ಎಂದು ಹೇಳಿಲ್ಲ. 75 ವರ್ಷ ಮೇಲ್ಪಟ್ಟವರಿಗೆ ಕೇಂದ್ರದ ನಾಯಕರು ಅವಕಾಶ ನೀಡಿರಲಿಲ್ಲ. ಯಡಿಯೂರಪ್ಪ ಅವರ ವಿಚಾರದಲ್ಲಿ ಅದು ವಿಶೇಷ ಸಂದರ್ಭ. ಈಗ ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆದುಕೊಂಡಿದ್ದಾರೆ. ಇದೀಗ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾರೆ" ಎಂದು ಹೇಳಿದ್ದಾರೆ.