ಬೆಂಗಳೂರು, ಆ. 01 (DaijiworldNews/SM): ರಾಜ್ಯದಲ್ಲಿ ಸಂಪುಟ ವಿಸ್ತರಣೆ ಕುರಿತಂತೆ ಬಿಸಿ ಬಿಸಿ ಚರ್ಚೆಯಾಗುತ್ತಿರುವಾಗಲೇ, ಸಿಎಂ ಬಸವರಾಜ್ ಬೊಮ್ಮಾಯಿ ಮತ್ತೊಮ್ಮೆ ದೆಹಲಿ ಟೂರು ಕೈಗೊಂಡಿದ್ದಾರೆ. ಸಂಪುಟ ವಿಸ್ತರಣೆ ಕುರಿತು ಕೇಂದ್ರದ ಬಿಜೆಪಿ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಲು ಸಿಎಂ ಡೆಲ್ಲಿ ಫ್ಲೈಟ್ ಏರಿದ್ದಾರೆ.
ಇನ್ನು ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಬಹುಶ: ನಾಳೆ ಸಭೆ ನಡೆಯುವ ಸಾಧ್ಯತೆಯಿದೆ ಎಂದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ತಿಳಿಸಿದ್ದಾರೆ.
ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ವಾರ ಬೇಕಾಗಿಲ್ಲ. ಸೋಮವಾರವೇ ಕೇಂದ್ರದ ವರಿಷ್ಠರಿಂದ ನಿರ್ದೇಶನ ಬರುವ ಸಾಧ್ಯತೆ ಇದೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಬಿಎಸ್ ವೈ ಸಂಪುಟದಲ್ಲಿ ಸಚಿವರಾಗಿದ್ದವರು ತಮ್ಮ ಖಾತೆಯನ್ನು ಮುಂದುವರಿಸುವಂತೆ ದುಂಬಾಲು ಬಿದ್ದಿದ್ದಾರೆ. ಮತ್ತೆ ಕೆಲ ಶಾಸಕರು ಈ ಬಾರಿ ಸಚಿವರಾಗುತ್ತೇವೆ ಎಂಬ ಆಕಾಂಕ್ಷೆಯಲ್ಲಿದ್ದಾರೆ. ಒಟ್ಟಾರೆ ಸಿಎಂ ದೆಹಲಿ ಪ್ರವಾಸ ಕುತೂಹಲ ಮೂಡಿಸಿದ್ದು, ನೂತನ ಸಚಿವ ಸಂಪುಟದಲ್ಲಿ ಯಾರೆಲ್ಲ ಸ್ಥಾನ ಪಡೆಯಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.