ಲಕ್ನೋ, ಆ 01 (DaijiworldNews/PY): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದ್ದು, "ಸಿಎಂ ಯೋಗಿ ಆದಿತ್ಯನಾಥ್ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ" ಎಂದಿದ್ದಾರೆ.
ಭಾನುವಾರ ಇಲ್ಲಿ ಉತ್ತರ ಪ್ರದೇಶ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯದ ಕಟ್ಟಡಕ್ಕೆ ಶೀಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, "ಜಾತಿ ಆಧಾರದಲ್ಲಿ ಬಿಜೆಪಿ ಸರ್ಕಾರ ಕೆಲಸ ಮಾಡುವುದಿಲ್ಲ. ಬಡವರ ಅಭಿವೃದ್ದಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಆದ್ಯ ಕರ್ತವ್ಯ" ಎಂದು ತಿಳಿಸಿದ್ದಾರೆ.
"ಕಳೆದ ಆರು ವರ್ಷದಿಂದ ಉತ್ತರಪ್ರದೇಶ ಗಣನೀಯವಾಗಿ ಅಭಿವೃದ್ದಿ ಹೊಂದಿದ್ದು, ಇವೆಲ್ಲಕ್ಕೂ ಯೋಗಿ ಅವರ ಆಡಳಿತ ಹಾಗೂ ಅವರ ನಾಯಕತ್ವವೇ ಕಾರಣ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಬಿಜೆಪಿ ಸರ್ಕಾರ ಜಾತಿ ಹಾಗೂ ಕುಟುಂಬ ಆಧಾರದಲ್ಲಿ ಕೆಲಸ ಮಾಡುವುದಿಲ್ಲ. ಬಡವರ ಅಭಿವೃದ್ದಿಗಾಗಿ ಹಾಗೂ ಕಾನೂನು ಸುವ್ಯವಸ್ಥೆಯ ಪುನರುಜ್ಜೀವನಕ್ಕಾಗಿ ಕೆಲಸ ಮಾಡಲಿದೆ. ಆರು ವರ್ಷಗಳ ಕಾಲ ಉತ್ತರ ಪ್ರದೇಶದಲ್ಲಿ ನಿರಂತರವಾಗಿ ಸಂಚರಿಸಿದ್ದು, ಈ ಹಿನ್ನೆಲೆ ಈ ಹಿಂದಿನ ಉತ್ತರಪ್ರದೇಶ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ" ಎಂದಿದ್ದಾರೆ.