ಲಖನೌ, ಆ.01 (DaijiworldNews/HR): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮುಂದಿನ ವರ್ಷ ನಡೆಯಲಿದ್ದು, ಅದರಲ್ಲಿ ಬಿಜೆಪಿಯನ್ನು ಸೋಲಿಸುವುದಕ್ಕಾಗಿ ಇತರ ರಾಜಕೀಯ ಪಕ್ಷಗಳು ಒಗ್ಗೂಡಬೇಕು ಎಂದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಸಮಾಜವಾದಿ ಪಕ್ಷದ ವಿರುದ್ಧ ನಿರಂತರ ವಾಗ್ದಾಳಿ ನಡೆಸುವ ಬಿಎಸ್ಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ನಿಲುವು ಸ್ಪಷ್ಟಪಡಿಸಬೇಕು" ಎಂದು ಆಗ್ರಹಿಸಿದ್ದಾರೆ.
ಇನ್ನು ಅನೇಕ ಸಣ್ಣ ಪಕ್ಷಗಳು ನಮ್ಮ ಜತೆ ಈಗಾಗಲೇ ಮೈತ್ರಿ ಮಾಡಿಕೊಂಡಿದ್ದು, ಉಳಿದ ಪಕ್ಷಗಳಿಗೂ ಸ್ವಾಗತವಿದ್ದು, ಇನ್ನೂ ಹೆಚ್ಚಿನ ಪಕ್ಷಗಳು ನಮ್ಮ ಜತೆ ಕೈಜೋಡಿಸಲಿವೆ" ಎಂದಿದ್ದಾರೆ.
ಪೆಗಾಸಸ್ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಎನ್ಡಿಎಗೆ ಲೋಕಸಭೆಯಲ್ಲಿ 350ರಷ್ಟು ಸ್ಥಾನಗಳಿದ್ದು, ಅನೇಕ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಆದರೂ ಅವರು ಗೂಢಚರ್ಯೆ ಯಾಕೆ ನಡೆಸುತ್ತಿದ್ದಾರೆ ಮತ್ತು ಆ ಮೂಲಕ ಏನನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.