ಚಿಕ್ಕಮಗಳೂರು, ಆ 01 (DaijiworldNews/PY): "ಸಿಎಂ ಹುದ್ದೆ ಅಲಂಕರಿಸುವುದಕ್ಕೆ ಯೋಗ ಇರಬೇಕಲ್ಲವೇ?. ಈಗ ಬಸವರಾಜ ಬೊಮ್ಮಾಯಿ ಅವರಿಗೆ ಯೋಗ ಕೂಡಿ ಬಂದಿದೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ತಿಳಿಸಿದ್ದಾರೆ.
ಮಲ್ಲೇನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯ ಸಿಎಂ ಸ್ಥಾನದ ರೇಶ್ ವಿಷಯದಲ್ಲಿ ಮಾಧ್ಯಮಗಳಲ್ಲಿ ನನ್ನ ಹೆಸರು ಕೇಳಿ ಬರುತ್ತಿತ್ತು. ಅಲ್ಲದೇ, ಹಲವು ಪ್ರಭಾವಿ ನಾಯಕರ ಹೆಸರೂ ಕೇಳಿ ಬರುತ್ತಿತ್ತು. ಸಿಎಂ ಹುದ್ದೆ ಅಲಂಕರಿಸುವುದಕ್ಕೂ ಯೋಗ ಇರಬೇಕು ಅಲ್ಲವೇ?. ಬೊಮ್ಮಾಯಿ ಅವರಿಗೆ ಈಗ ಯೋಗ ಕೂಡಿಬಂದಿದೆ" ಎಂದಿದ್ದಾರೆ.
"ಸಿಎಂ ಬಸವರಾಜ ಬೊಮ್ಮಾಯಿ ಅವರು ಉತ್ತಮ ರೀತಿಯಾಗಿ ಕೆಲಸ ಮಾಡುತ್ತಾರೆ ಎನ್ನುವ ನಿರೀಕ್ಷೆ ಇದೆ. ನಾವು ಅವರಿಗೆ ಎಲ್ಲಾ ರೀತಿಯಾದ ಸಹಕಾರ ನೀಡುತ್ತೇವೆ. ರಾಜ್ಯದ ಹಿತಕ್ಕೆ ಅವರು ಮಾಡುವ ಕಾರ್ಯಕ್ಕೆ ನಮ್ಮ ಬೆಂಬಲವಿದೆ" ಎಂದು ಹೇಳಿದ್ದಾರೆ.
ಸಚಿವ ಸಂಪುಟ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಉತ್ತಮ ಸಚಿವ ಸಂಪುಟ ರಚಿಸಿ ಅವರ ನೇತೃತ್ವದಲ್ಲೇ ಮತ್ತೆ ಚುನಾವಣೆ ಗೆದ್ದು ಬರಬೇಕು. ಆ ರೀತಿಯಾಗಿ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆ ಎನ್ನುವ ಭರವಸೆ ಇದೆ. ರಾಜ್ಯದ ಹಿತದ ಆದ್ಯತೆ ಮುಂದಿಟ್ಟುಕೊಂಡು ಸಂಪುಟ ವಿಸ್ತರಣೆ ಮಾಡಲಿ" ಎಂದಿದ್ದಾರೆ.
ಮೇಕೆದಾಟು ಯೋಜನೆಯ ವಿರುದ್ದವಾಗಿ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಅವರ ಉಪವಾಸ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಶೇ.30ರಷ್ಟು ತಮಿಳುನಾಡಿವರೇ ಬೆಂಗಳೂರಿನಲ್ಲಿದ್ದಾರೆ. ಎರಡು ರಾಜ್ಯಕ್ಕೆ ಅನುಕೂಲವಾಗುವ ರೀತಿಯಲ್ಲಿ ಮೇಕೆದಾಟು ಯೋಜನೆ ಮಾಡಬೇಕು. ಈ ಬಗ್ಗೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ರಾಜಕಾರಣ ಮಾಡದೇ ಸೂಕ್ತವಾದ ತೀರ್ಮಾನ ಕೈಗೊಳ್ಳಲಿ" ಎಂದು ತಿಳಿಸಿದ್ದಾರೆ.