ಬೆಂಗಳೂರು, ಆ 01 (DaijiworldNews/PY): ಭಾರಿ ಮಳೆ, ಪ್ರವಾಹದ ಪರಿಣಾಮ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ನೆರೆ ಸಂಕಷ್ಟ ವಿಚಾರವಾಗಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, "ಮಳೆ ಕಡಿಯಾದರೂ ಕೂಡಾ ಹಲವು ಪ್ರದೇಶಗಳಲ್ಲಿ ಪ್ರವಾಹದಿಂದ ನೀರು ತುಂಬಿಕೊಂಡಿದ್ದು, ನೀರು ಹಾಗೆಯೇ ನಿಂತಿದೆ. ಅನೇಕ ಪ್ರದೇಶಗಳು ಜಲಾವೃತಗೊಂಡಿದ್ದು, ಇದರ ಪರಿಣಾಮ 466 ಗ್ರಾಮಗಳು ಸಂಕಷ್ಟಕ್ಕೊಳಗಾಗಿವೆ. ಭಾರೀ ಪಳೆಯ ಪರಿಣಾಮ ರಾಜ್ಯದಲ್ಲಿ ಇಲ್ಲಿಯವರೆಗೆ 13 ಮಂದಿ ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
"ಮಳೆಯ ಪರಿಣಾಮ ಶೇ.75ರಷ್ಟು ಭಾಗ ಮನೆಕಳೆದುಕೊಂಡವರಿಗೆ 5 ಲಕ್ಷ ಹಾಗೂ ಅರ್ಧ ಮನೆ ಕಳೆದುಕೊಂಡವರಿಗೆ 3 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಬೆಳೆ ಹಾನಿ ಸಮೀಕ್ಷೆ ನಡೆಸಿ 15 ದಿನಗಳಲ್ಲಿ ವರದಿ ನೀಡಬೇಕು. ಮನೆ ಹಾನಿಯಾದವರಿಗೆ ತಕ್ಷಣ 10,000 ಪರಿಹಾರ ವಿತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ" ಎಂದಿದ್ದಾರೆ.