ಬಾಗಲಕೋಟೆ, ಆ.01 (DaijiworldNews/HR): ಕರ್ನಾಟಕದ ಬಿಜೆಪಿ ನಾಯಕರಲ್ಲಿ ಅಸಮಾಧಾನ ಎಂಬ ಪ್ರಶ್ನೆಯೇ ಇಲ್ಲ, ಇನ್ನೆರಡು ಮೂರು ದಿನಗಳಲ್ಲಿ ಕೇಂದ್ರದ ನಾಯಕರು ರಾಜ್ಯಕ್ಕೆ ಬಂದು ಅಸಮಾಧಾನ ಏನೇನಿದೆ ಎಂದು ತಿಳಿದುಕೊಂಡು ನಾಯಕರನ್ನು ಕರೆದು ಕೂರಿಸಿ ಚರ್ಚೆ ಮಾಡಿ ಬಗೆಹರಿಸುತ್ತಾರೆ" ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಯ ಕಾರ್ಯಕರ್ತರು ಹಾಲಿದ್ದಂತೆ. ಹೊಸಬರು ಬಂದು ಸೇರ್ಪಡೆಗೊಂಡವರು ಜೇನಿದ್ದಂತೆ. ಹಾಲು-ಜೇನು ಸೇರಿದರೆ ಎಷ್ಟು ಸವಿಯಿರುತ್ತದೆಯೋ ಹಾಗೆಯೇ ಇಡೀ ದೇಶದಲ್ಲಿ ಬಿಜೆಪಿಗೆ ಯಾರ್ಯಾರು ಬಂದು ಸೇರಿದ್ದಾರೆಯೋ ಅವರೆಲ್ಲರನ್ನೂ ಒಗ್ಗೂಡಿಸಿಕೊಂಡು ಒಟ್ಟಾಗಿದ್ದೇವೆಯೇ ವಿನಃ ಯಾವುದೇ ವಿಷಯದಲ್ಲಿಯೂ ಗೊಂದಲವಿಲ್ಲ" ಎಂದರು.
ಇನ್ನು ತಾಕತ್ತಿದ್ದರೆ ದಲಿತರನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳುವ ಕಾಂಗ್ರೆಸ್ ಸ್ವಾತಂತ್ರ್ಯ ಬಂದ ಬಳಿಕ ಎಷ್ಟು ದಲಿತ ನಾಯಕರನ್ನು ಮುಖ್ಯಮಂತ್ರಿ ಮಾಡಿದೆ ಎಂದು ಪ್ರಶ್ನಿಸಿರುವ ಅವರು, ಹಗೆ ರಾಜಕೀಯದಿಂದ ಮುಖ್ಯಮಂತ್ರಿ ಆಗುವ ಅವಕಾಶವಿದ್ದ ಡಾ. ಜಿ ಪರಮೇಶ್ವರ್ ಅವರನ್ನು ಸೋಲಿಸಿ ಅನ್ಯಾಯ ಮಾಡಿದ್ದಾರೆ. ಹಾಗಿರುವಾಗ ಬಿಜೆಪಿ ಬಗ್ಗೆ ಹೇಳಲು ಎಷ್ಟು ಹಕ್ಕು ಇದೆ, ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೊಮ್ಮಾಯಿ ನಮ್ಮ ಪ್ರಾಡಕ್ಟ್ ಎಂದಿದ್ದ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಬಸವರಾಜ ಬೊಮ್ಮಾಯಿ ಜನತಾದಳವನ್ನು ಒದ್ದು ಬಿಜೆಪಗೆ ಬಂದರು. ಮೊದಲು ಅದರ ಬಗ್ಗೆ ಹೇಳಿ ಕುಮಾರಸ್ವಾಮಿಯವರೇ… ಪಕ್ಷ, ಸಂಘಟನೆ, ಸಿದ್ದಾಂತ ಒಪ್ಪಿದವರಿಗೆ ಯಾವ ಸ್ಥಾನಮಾನವಾದರೂ ಕೊಡ್ತೇವಿ ಅನ್ನೋದಕ್ಕೆ ಬೊಮ್ಮಾಯಿ ಸಾಕ್ಷಿ" ಎಂದು ತಿರುಗೇಟು ನೀಡಿದರು.