ನವದೆಹಲಿ, ಆ 01 (DaijiworldNews/PY): ಸುಪ್ರೀಂ ಕೋರ್ಟ್ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಪೆಗಾಸಸ್ ಗೂಢಚರ್ಯೆ ವಿಷಯವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಹಿರಿಯ ಪತ್ರಕರ್ತ ಎನ್.ರಾಮ್ ಹಾಗೂ ಶಶಿ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 5ರಂದು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ.
ಸುಪ್ರೀಂ ಕೋರ್ಟ್ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ, ಆಗಸ್ಟ್ 5ರಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ಪೀಠ ಈ ಅರ್ಜಿಯ ವಿಚಾರಣೆಯನ್ನು ನಡೆಸಿಲಿದೆ. ಈ ಬಗ್ಗೆ ಸಲ್ಲಿಕೆಯಾಗಿರುವ ಮೂರು ಪ್ರತ್ಯೇಕ ಅರ್ಜಿಗಳ ವಿಚಾರಣೆ ಕೂಡಾ ಇದೇ ಸಂದರ್ಭ ನಡೆಯಲಿದೆ.
ಇಸ್ರೇಲಿ ಕುತಂತ್ರಾಂಶವಾದ ಪೆಗಾಸಸ್ ಬಳಸಿ, ಸರ್ಕಾರ ಸಂಸ್ಥೆಗಳು, ನಾಗರಿಕರು, ರಾಜಕಾರಣಿಗಳು ಸೇರಿದಂತೆ ಹಲವು ಪ್ರಮುಖರ ಮೇಲೆ ಗೂಢಚಯೇ ನಡೆಸಲಾಗಿದೆ ಎಂದು ಮೂರು ಅರ್ಜಿಗಳಲ್ಲಿ ದೂರಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ಮನವಿ ಮಾಡಲಾಗಿದೆ.