ಕೋಲ್ಕತ್ತ,ಆ.01 (DaijiworldNews/HR): ನಾನು ರಾಜಕೀಯ ತೊರೆಯುತ್ತಿದ್ದೇನೆ. ಟಿಎಂಸಿ, ಸಿಪಿಐ(ಎಂ) ಅಥವಾ ಕಾಂಗ್ರೆಸ್ ಸೇರುವುದಿಲ್ಲ ಎಂದು ಪ್ರಕಟಿಸಿದ್ದ ಫೇಸ್ಬುಕ್ ಪೋಸ್ಟ್ ಅನ್ನು ಕೇಂದ್ರದ ಮಾಜಿ ಸಚಿವ, ಬಿಜೆಪಿ ನಾಯಕ ಬಬೂಲ್ ಸುಪ್ರಿಯೋ ಮತ್ತೆ ತಿದ್ದಿದ್ದಾರೆ ಎನ್ನಲಾಗಿದೆ.
ಬಬೂಲ್ ಸುಪ್ರಿಯೋ ಅವರು ಬರೆದಿದ್ದ ಪೋಸ್ಟ್ ನಲ್ಲಿ ಇತರೆ ಪಕ್ಷಗಳಿಗೆ ಸೇರುವುದಿಲ್ಲ ಎಂಬ ಅಂಶವನ್ನು ಅವರು ತೆಗೆದು ಹಾಕಿದ್ದು, ಈ ಮೂಲಕ ಬಬೂಲ್ ಅವರದ್ದು ಮುಂದೆ ಯಾವ ಪಕ್ಷ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮನೆ ಮಾಡಿದೆ.
ಇನ್ನು ನನ್ನ ತಂದೆ, ಪತ್ನಿ, ಮಗಳು ಮತ್ತು ಕೆಲವು ಆಪ್ತ ಸ್ನೇಹಿತರ ಮಾತುಗಳನ್ನು ಆಲಿಸಿದೆ. ಎಲ್ಲವನ್ನೂ ಆಲಿಸಿದ ನಂತರ, ಬೇರೆ ಯಾವುದೇ ಪಕ್ಷಕ್ಕೆ ಸೇರುವ ನಿರ್ಧಾರವನ್ನು ನಾನು ತೆಗೆದುಕೊಂಡಿಲ್ಲ. ನಾನು ಕಾಂಗ್ರೆಸ್, ಟಿಎಂಸಿ ಅಥವಾ ಸಿಪಿಎಂ ಪಕ್ಷಗಳನ್ನು ಸೇರುತ್ತಿಲ್ಲ. ಅವರೂ ಸಹ ನನ್ನನ್ನು ಕರೆದಿಲ್ಲ ಎಂದು ಖಚಿತಪಡಿಸುತ್ತಿದ್ದೇನೆ ಎಂದು ಅವರು ಶನಿವಾರ ಫೇಸ್ಬುಕ್ನಲ್ಲಿ ಪೋಸ್ಟ್ ಪ್ರಕಟಿಸಿದ್ದರು.
ಮೋದಿ ನೇತೃತ್ವದ ಕೇಂದ್ರ ಸಂಪುಟದಲ್ಲಿದ್ದ ರಾಜ್ಯ ಖಾತೆ ಸಚಿವರಾಗಿ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿದ್ದ ಬಬೂಲ್ ಅವರನ್ನು ಇತ್ತೀಚೆಗೆ ಸಂಪುಟದಿಂದ ಹೊರದಬ್ಬಲಾಗಿತ್ತು.