ಮೈಸೂರು, ಆ 01 (DaijiworldNews/PY): ಕೇಂದ್ರ ಸರ್ಕಾರದಿಂದ ರಾಜ್ಯದ ಪಾಲಿನ ಹಣ ಬರುತ್ತಿಲ್ಲ ಎಂದು ಹೇಳಿಕೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿರುವ ಸಂಸದ ಪ್ರತಾಪ್ ಸಿಂಹ, "ಸಿದ್ದರಾಮಯ್ಯ ರಾಜಕೀಯಕ್ಕಾಗಿ ಮಾತನಾಡುವುದನ್ನು ಬಿಡಬೇಕು" ಎಂದಿದ್ದಾರೆ.
"ಎಲ್ಲಾ ಗೊತ್ತಿದ್ದೂ ಕೂಡಾ ಸಿದ್ದರಾಮಯ್ಯ ರಾಜಕೀಯ ಮಾತನಾಡುತ್ತಾರೆ. ಅವರ ಹೇಳಿಕೆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ" ಎಂದು ಹೇಳಿದ್ದಾರೆ.
"13 ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರಿಗೆ ಎಲ್ಲಾ ತಿಳಿದಿರುತ್ತದೆ. ಹೆದ್ದಾರಿ ಕಾರ್ಯಕ್ಕೆ 95 ಸಾವಿರ ಕೋಟಿ ರೂ. ಕೊಟ್ಟಿದ್ದು ಕೇಂದ್ರ ಸರ್ಕಾರ. ಬೆಂಗಳೂರು-ಮೈಸೂರು ಹೆದ್ದಾರಿ ಅಭಿವೃದ್ದಿಗೆ ಕೇಂದ್ರ ಸರ್ಕಾರ 8096 ಕೋಟಿ ರೂ. ನೀಡಿದೆ. ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡುತ್ತಿರುವುದು ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಅಗತ್ಯವಾದ ಅನುದಾನವನ್ನು ನೀಡುತ್ತಾ ಬಂದಿದೆ" ಎಂದಿದ್ದಾರೆ.